ಜಂಗೀಪುರದಲ್ಲಿ SDPI ನಮ್ಮೆದುರು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ದುರದೃಷ್ಟಕರ; ಪ್ರಚಾರಕ್ಕಾಗಿ ಸ್ಪರ್ಧಿಸುವ ಸಮಯ ಇದಲ್ಲ… WPI ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಸಂದರ್ಶನ

0
3168

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವೆಲ್ ಫೇರ್ ಪಾರ್ಟಿ ಆಫ್ ಇಂಡಿಯ (WPI) ದ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್ ರ ಜೊತೆ ಸನ್ಮಾರ್ಗ ನಡೆಸಿದ ಮಾತುಕತೆಯನ್ನು ಇಲ್ಲಿ ನೀಡುತ್ತಿದ್ದೇವೆ.

ಪ್ರಶ್ನೆ- 1. ಮೋದಿ ಮತ್ತೆ ಪ್ರಧಾನಿಯಾಗುವರೋ?

ಉತ್ತರ: .ಮೋದಿ ಮತ್ತೊಮ್ಮೆ ಪ್ರಧಾನಿ ಆಗುವ ಸಾಧ್ಯತೆ ಕಡಿಮೆ ಇದೆ. ದೇಶದಲ್ಲಿ ಸರ್ಕಾರ ಯಾರು ರಚಿಸುತ್ತಾರೆ ಎಂಬುದು ರಲ್ಲಿ ಉತ್ತರ ಪ್ರದೇಶ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಈ ಬಾರಿ ಉತ್ತರ ಪ್ರದೇಶದಲ್ಲಿ SP ಮತ್ತು BSP ಮೈತ್ರಿ ಮಾಡಿಕೊಂಡಿರುವುದರಿಂದ ಮತ್ತು ಯೋಗಿ ಆದಿತ್ಯನಾಥ್ ಅವರ ದುರಾಡಳಿತದಿಂದ ಬಿಜೆಪಿ ಉತ್ತರಪ್ರದೇಶದಲ್ಲಿ ನೆಲಕಚ್ಚಲಿದೆ. ಇನ್ನು 2014ಇದರಲ್ಲಿ UPA ಯ ವೈಫಲ್ಯತೆಯನ್ನು ಮುಂದಿಟ್ಟು ಮತ್ತು ಸುಳ್ಳು ಭರವಸೆಗಳನ್ನು ಕೊಟ್ಟು ಕೇವಲ 31% ಮತಗಳನ್ನು ಮಾತ್ರ ಗಳಿಸಿ ಬಿಜೆಪಿ ಸರಕಾರ ರಚಿಸಿತ್ತು. ಆ ಎಲ್ಲ ಭರವಸೆಗಳು ಹುಸಿಯಾಗಿ, ರೈತರು, ಬಡವರು ಕೂಲಿ ಕಾರ್ಮಿಕರು ಸಾಮಾನ್ಯ ಜನರು ಸರ್ಕಾರ ಆದಷ್ಟು ಬೇಗ ತೊಲಗಿದರೆ ಉತ್ತಮ ಎಂದು ಶಾಪ ಹಾಕುತ್ತಿದ್ದಾರೆ. ಹಾಗಾಗಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸುವುದು ಕಷ್ಟಸಾಧ್ಯ ಮತ್ತು ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸಾಧ್ಯವಿಲ್ಲ ಎಂದು ಕಾಣುತ್ತಿದೆ.

ಪ್ರಶ್ನೆ- 2. ವೆಲ್ಫೇರ್ ಪಾರ್ಟಿ ರಾಜ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ, ಏನು ಕಾರಣ? ಬೇರೆ ಯಾವ ಪಕ್ಷಕ್ಕಾದರೂ ಬೆಂಬಲ ಸಾರಿದೆಯೇ?

ಉತ್ತರ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ, ಅದರ ಕಾರಣ ಈ ಬಾರಿ ದೇಶದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ದೇಶ ಮತ್ತು ಸಂವಿಧಾನದ ಮೇಲೆ ಕಂಟಕ ಬಂದಿದೆ. ಕೇವಲ ಪ್ರಚಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯ ಇದಲ್ಲ, ಬದಲಿಗೆ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವುದು ಬಹಳ ಮುಖ್ಯವಾಗಿದೆ. ಪಕ್ಷವು ಈ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಂಥ ಪಕ್ಷಗಳಿಗೆ ಬೆಂಬಲ ನೀಡಲು ತೀರ್ಮಾನಿಸಿದೆ. ಇನ್ನು ಎರಡನೆಯದಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದೆ. ಮೌಲ್ಯಾಧಾರಿತ ರಾಜಕೀಯದ ನೈಜ ಪರಿಕಲ್ಪನೆಯ ಮಾದರಿ ಜನರ ಮುಂದೆ ತರುವುದು ಬಹಳ ಮುಖ್ಯವಾಗಿದೆ. ಇದರಲ್ಲಿ ಪಕ್ಷ ಯಶಸ್ಸು ಕೂಡ ಕಂಡಿದೆ. ನಾವು ಕೇವಲ ಈ ದೇಶದಲ್ಲಿ ಅಧಿಕಾರಕ್ಕೆ ಏರುವ ಕನಸು ಕಂಡು ಈ ಪಕ್ಷ ಕಟ್ಟಿಲ್ಲ ಬದಲಾಗಿ ಈ ದೇಶದಲ್ಲಿ ರಾಜಕೀಯ ವ್ಯವಸ್ಥೆ ಬದಲಾಗಬೇಕು ಎಂಬುದು ನಮ್ಮ ಕನಸು.

ಪ್ರಶ್ನೆ- 3. ವೆಲ್ಫೇರ್ ದೇಶದ ಎಷ್ಟು ಕಡೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ?

ಉತ್ತರ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಮೂರು ಕಡೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಜಂಗಿಪುರ ಮತ್ತು ಕೂಚ್ ಬಿಹಾರ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ.

ಪ್ರಶ್ನೆ- 4. ಜಂಗೀಪುರದಲ್ಲಿ ವೆಲ್ಫೇರ್ ಅಧ್ಯಕ್ಷರ ವಿರುದ್ಧ SDPI ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯಲ್ಲ, ಯಾಕೆ ಮೈತ್ರಿ ಸಾಧ್ಯವಾಗಿಲ್ಲ?

ಉತ್ತರ: ಜಂಗೀಪುರದಲ್ಲಿ SDPI ನಮ್ಮ ರಾಷ್ಟ್ರೀಯ ಅಧ್ಯಕ್ಷ ಕಾಸಿಂ ರಸೂಲ್ ಇಲ್ಯಾಸ್ ರ ವಿರುದ್ಧ ತನ್ನ ಅಭ್ಯರ್ಥಿ ಕಣಕ್ಕಿಳಿಸಬಾರದು ಎಂದು ನಾವು ಮನವಿ ಮಾಡಿಕೊಂಡಿದ್ದೇವೆ, ರಾಜ್ಯ ನಾಯಕರಿಂದ ಸ್ಪಂದನೆಯೂ ಕೂಡ ನಮಗೆ ಸಿಕ್ಕಿತು. ಬೇರೆ ಎಲ್ಲಾ ಸಣ್ಣಪುಟ್ಟ ಪಕ್ಷಗಳು ವೆಲ್ಫೇರ್ ಪಾರ್ಟಿ ಗೆ ಬೆಂಬಲ ಘೋಷಿಸಿವೆ. ಬಾಬರಿ ಮಸ್ಜಿದ್ ಆಕ್ಷನ್ ಕಮಿಟಿ ಮತ್ತು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಂತಹ ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಯಾಗಿರುವ ಡಾ|ಎಸ್ ಕ್ಯೂ ಆರ್ ಇಲ್ಯಾಸ್ ರಂತಹ ಸೂಕ್ತ ಅಭ್ಯರ್ಥಿ ಕಣದಲ್ಲಿ ಇರುವಾಗ ಅವರ ವಿರುದ್ಧ ಸ್ಪರ್ಧೆ ಮಾಡುವ ಬದಲು ಅವರಿಗೆ ಬೆಂಬಲ ಘೊಷಿಸಬೆಕಾಗಿತ್ತು. ನಮಗೆ ಈಗಲೂ ಕೂಡ ವಿಶ್ವಾಸ ಇದೆ SDPI ತನ್ನ ಈ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸುತ್ತದೆ ಎಂದು.

ಪ್ರಶ್ನೆ- 5. Wpi ಮುಂದಿನ ರಾಜಕೀಯ ರಣತಂತ್ರ ಏನು?

ಉತ್ತರ: ಈ ದೇಶದಲ್ಲಿ ಇವತ್ತು ರಾಜಕೀಯ ಎಂದರೆ ಬೆದರುವ ಜನರೇ ಹೆಚ್ಚಾಗಿದಾರೆ. ಅದಕ್ಕೆ ಕಾರಣ ಇವತ್ತಿನ ರಾಜಕೀಯ ವ್ಯವಸ್ಥೆ. ರಾಜಕೀಯದಲ್ಲಿ ಕುಸಿದಿರುವ ಮೌಲ್ಯಗಳು, ಹಣ ಹೆಂಡ ತೋಳ್ಬಲದಿಂದ ಅಧಿಕಾರಕ್ಕೆ ಏರುವ ದುರಾಸೆ ಜನರಲ್ಲಿ ರಾಜಕೀಯದ ಬಗ್ಗೆ ಹೇಸಿಗೆ ಅನ್ನಿಸುವ ಹಾಗೆ ಮಾಡಿದೆ. ಷಡ್ಯಂತ್ರ, ಕುತಂತ್ರ ವಾಮಮಾರ್ಗ ರಾಜಕೀಯದ ಇನ್ನೊಂದು ಹೆಸರಾಗಿದೆ. ರಾಜಕೀಯ ಎಂದರೆ ಜನಸೇವೆ ಎನ್ನುವ ಕಲ್ಪನೆಯ ಬದಲು ತನ್ನ ಮತ್ತು ತನ್ನ ಕುಟುಂಬದ ಸೇವೆಯೇ ರಾಜಕೀಯ ಎಂದು ಅರ್ಥ ಕಲ್ಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶದಲ್ಲಿ, ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಜನರ ಮುಂದೆ ರಾಜಕೀಯದ ಸರಿಯಾದ ಕಲ್ಪನೆಯನ್ನು ಮುಂದಿಡುವುದು, ರಾಜಕೀಯವನ್ನು, ಕುಟುಂಬ ರಾಜಕೀಯ, ಜಾತಿ ರಾಜಕೀಯ ಗಳಿಂದ ಸ್ವಚ್ಛಗೊಳಿಸಿ ಮೌಲ್ಯಾಧಾರಿತ ರಾಜಕೀಯ ಕಲ್ಪನೆ ಜನರ ಮುಂದೆ ಇಡುವುದು ನಮ್ಮ ಗುರಿಯಾಗಿದೆ. ಈ ದೇಶದ ಯುವಕರು ಹೆಚ್ಚೆಚ್ಚು ರಾಜಕೀಯದಲ್ಲಿ ಪಾಲ್ಗೊಂಡು ಈ ದೇಶದ ರಾಜಕೀಯ ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಅದಕ್ಕಾಗಿ ಪಕ್ಷ ತಳಮಟ್ಟದಿಂದ ಸಂದೇಶವನ್ನು ದೇಶದ ನಾಗರಿಕರ ಮುಂದೆ ತರುವ ಪ್ರಯತ್ನ ಮಾಡುವುದು.