Home ಸುದ್ದಿ ಶಬರಿಮಲೆ ತೀರ್ಪಿಗೆ ಎಲ್ಲರೂ ಬದ್ಧರು- ಕೇರಳ ಹೈಕೋರ್ಟು
ಕೊಚ್ಚಿ: ಸುಪ್ರೀಂ ಕೋರ್ಟಿನ ತೀರ್ಪು ದೇಶದ ಕಾನೂನು ಆಗಿದೆಯೆಂದು ಹೈಕೋರ್ಟು ಹೇಳಿದೆ. ಸುಪ್ರಿಂ ಕೋರ್ಟಿನ ತೀರ್ಪನ್ನು ಪಾಲಿಸಲು ದೇಶದ ಎಲ್ಲ ಸಿವಿಲ್, ಜ್ಯುಡಿಶಿಯಲ್ ಅಧಿಕಾರಿಗಳು ಹೊಣೆಗಾರರಾಗಿದ್ದಾರೆ. ಸಂವಿಧಾನದ 141, 144 ಪರಿಚ್ಛೇದ ಇದನ್ನು ತಿಳಿಸುತ್ತಿದೆ ಎಂದು ಕೋರ್ಟು ನೆನಪಿಸಿದೆ.
ಸಾಕಷ್ಟು ಸುರಕ್ಷೆ ಮತ್ತು ಮೂಲಭೂತ ಸೌಕರ್ಯಗಳು ಆಗುವವರೆಗೆ ಶಬರಿಮಲೆಗೆ ಯುವತಿಯರನ್ನು ಹೋಗಲು ಬಿಡಬಾರದು ಎಂದು ಆದೇಶಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಚೀಫ್ ಜಸ್ಟಿಸ್ ಹೃಷಿಕೇಶ್ ರಾಯ್ ಮತ್ತು ಜಸ್ಟಿಸ್ ಎಕೆ ನಂಬಿಯಾರ್ರಿದ್ದ ವಿಭಾಗೀಯ ಪೀಠ ತಳ್ಳಿಹಾಕಿದೆ.
ತೀರ್ಪಿನಲ್ಲಿ ವಿರೋಧವಿದ್ದರೆ ಸುಪ್ರೀಂ ಕೋರ್ಟನ್ನು ಸಂಪರ್ಕಿಸಬೇಕೆಂದು ಅರ್ಜಿದಾರ ಪಿ.ಡಿ. ಜೋಸೆಫ್ರಿಗೆ ಕೋರ್ಟು ಸೂಚಿಸಿದೆ. ಸುರಕ್ಷಾ ವ್ಯವಸ್ಥೆ ಜಾರಿಯಾಗದೇ ಅವಸರದಿಂದ ಯುವತಿಯರ ಪ್ರವೇಶಕ್ಕೆ ಅವಕಾಶ ನೀಡಿದ್ದು ಶಬರಿಮಲೆಯಲ್ಲಿನ ಅಹಿತಕರ ಘಟನೆಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಜೋಸೆಫ್ ವಾದಿಸಿದ್ದರು.