2015-25 ದಾಖಲೆಯ ಅತ್ಯಂತ ಶಾಖದ ದಶಕ: ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ

0
221

ಸನ್ಮಾರ್ಗ ವಾರ್ತೆ

ವಿಶ್ವ ಹವಾಮಾನ ಸಂಸ್ಥೆಯು ದತ್ತಾಂಶವನ್ನು ದಾಖಲಿಸಲು ಪ್ರಾರಂಭಿಸಿದಾಗಿನಿಂದ 2015 ಮತ್ತು 2025 ರ ನಡುವಿನ ವರ್ಷಗಳು ಅತ್ಯಂತ ಶಾಖಭರಿತ ವರ್ಷಗಳಾಗಿವೆ ಎಂದು ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆಯು ಸೋಮವಾರ ತಿಳಿಸಿದೆ.ಸಂಸ್ಥೆಯ ವಾರ್ಷಿಕ ‘ಜಾಗತಿಕ ಹವಾಮಾನ ಸ್ಥಿತಿಗತಿ’ ವರದಿಯು, 2025 ನೇ ವರ್ಷವು ದಾಖಲೆಯ ಎರಡನೇ ಅಥವಾ ಮೂರನೇ ಅತ್ಯಂತ ಶಾಖಭರಿತ ವರ್ಷವಾಗಿದ್ದು, ಇದು ಕೈಗಾರಿಕಾ ಪೂರ್ವ ಸರಾಸರಿಗಿಂತ ಸುಮಾರು 1.43 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ ಎಂದು ತಿಳಿಸಿದೆ.

2024 ದಾಖಲೆಯ ಅತ್ಯಂತ ಶಾಖಭರಿತ ವರ್ಷವಾಗಿದೆ ಎಂದು ವರದಿ ತಿಳಿಸಿದೆ. ಆ ವರ್ಷದಲ್ಲಿ 1850 ರಿಂದ 1990 ರ ಸರಾಸರಿಗಿಂತ 1.55 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿತ್ತು. 2015 ರ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ, ಸರಾಸರಿ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮಾಡಲು ಪ್ರಯತ್ನಿಸುವ ದೀರ್ಘಕಾಲೀನ ಗುರಿಗೆ ಹಲವಾರು ದೇಶಗಳು ಬದ್ಧವಾಗಿವೆ.

ಭೂಮಿಯ ಹವಾಮಾನವು “ಇತಿಹಾಸದಲ್ಲಿ ಗಮನಿಸಿದ ಯಾವುದೇ ಘಟ್ಟಕ್ಕಿಂತ ಹೆಚ್ಚು ಅಸಮತೋಲನದಲ್ಲಿದೆ” ಮತ್ತು ಇದರ ಪರಿಣಾಮಗಳು “ನೂರಾರು – ಮತ್ತು ಬಹುಶಃ ಸಾವಿರಾರು – ವರ್ಷಗಳವರೆಗೆ” ಕಂಡುಬರುತ್ತವೆ ಎಂದು ವರದಿಯು ಎತ್ತಿ ತೋರಿಸಿದೆ.

ವಿಶ್ವದ ಸಾಗರಗಳು ಸತತ ಒಂಬತ್ತು ವರ್ಷಗಳಿಂದ ಶಾಖದ ದಾಖಲೆಗಳನ್ನು ಮುರಿದಿವೆ ಎಂದು ವರದಿ ಹೇಳಿದೆ, ಜೊತೆಗೆ ಕಳೆದ 20 ವರ್ಷಗಳಿಂದ ಅವು ವಾರ್ಷಿಕವಾಗಿ ಮಾನವ ಶಕ್ತಿಯ ಬಳಕೆಯ ಸುಮಾರು 18 ಪಟ್ಟು ಸಮಾನವಾದ ಶಾಖವನ್ನು ಹೀರಿಕೊಳ್ಳುತ್ತಿವೆ ಎಂದು ಸೇರಿಸಿದೆ. 2025 ರಲ್ಲಿ, 2,000 ಮೀಟರ್ ಆಳದವರೆಗಿನ ಸಾಗರದ ಶಾಖದ ಅಂಶವು, 1960 ರಲ್ಲಿ ದಾಖಲೆಗಳು ಪ್ರಾರಂಭವಾದಾಗಿನಿಂದ ಅತ್ಯುನ್ನತ ಮಟ್ಟವನ್ನು ತಲುಪಿದೆ ಎಂದು ವರದಿಯು ಹೈಲೈಟ್ ಮಾಡಿದೆ.

“ಪ್ರತಿಯೊಂದು ಪ್ರಮುಖ ಹವಾಮಾನ ಸೂಚಕವು ಕೆಂಪು ದೀಪವನ್ನು ಬೆಳಗಿಸುತ್ತಿದೆ (ಅಪಾಯದ ಸೂಚನೆ ನೀಡುತ್ತಿದೆ),” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. “ಮಾನವಕುಲವು ದಾಖಲೆಯ 11 ಅತ್ಯಂತ ಶಾಖಪೂರಿತ ವರ್ಷಗಳನ್ನು ಅನುಭವಿಸಿದೆ. ಇತಿಹಾಸವು 11 ಬಾರಿ ಪುನರಾವರ್ತನೆಯಾದಾಗ, ಅದು ಇನ್ನು ಮುಂದೆ ಕಾಕತಾಳೀಯವಲ್ಲ. ಇದು ಕಾರ್ಯಪ್ರವೃತ್ತರಾಗಲು ಕರೆ ನೀಡುವ ಸಮಯವಾಗಿದೆ.”

ರೋಗವಾಹಕ ಮತ್ತು ನೀರಿನಿಂದ ಹರಡುವ ಕಾಯಿಲೆಗಳ ಅಪಾಯಗಳನ್ನು ಹೆಚ್ಚಿಸುವ ಮೂಲಕ ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ವರದಿಯು ಒತ್ತಿಹೇಳಿದೆ. ಡೆಂಗ್ಯೂ ಜ್ವರವು ವಿಶ್ವದ ಅತಿ ವೇಗವಾಗಿ ಹರಡುವ ಸೊಳ್ಳೆ ಹರಡುವ ಕಾಯಿಲೆಯಾಗಿದೆ ಎಂದು ವರದಿ ಗಮನಿಸಿದೆ.

ಇದೇ ವೇಳೆ, ಜಾಗತಿಕ ಕಾರ್ಯಪಡೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಅಂದರೆ 1.2 ಬಿಲಿಯನ್ ಕಾರ್ಮಿಕರು ಪ್ರತಿ ವರ್ಷ ಅಪಾಯಕಾರಿ ಕೆಲಸದ ಸ್ಥಳದ ಶಾಖಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.