ಮುಝಫ್ಫರಾಬಾದ್: ಭಾರತ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದು ಪಾಕಿಸ್ತಾನದ ಗಡಿಯೊಳಗೆ ಭಾರತ ವಾಯುಸೇನೆಯ ವಿಮಾನಗಳು ನುಸುಳಲು ಪ್ರಯತ್ನಿಸಿದಾಗ ಪಾಕಿಸ್ತಾನದ ವಾಯುಸೇನೆ ವಿಫಲಗೊಳಿಸಿದೆ ಎಂದು ಪಾಕಿಸ್ತಾನ ಹೇಳಿದೆ. ಮೇಜರ್ ಜನರಲ್ ಆಸಿಫ್ ಗಫೂರ್ ತಮ್ಮ ಟ್ವಿಟರ್ ನಲ್ಲಿ ಈ ವಿಷಯವನ್ನು ಹೇಳಿದ್ದು ಬಾಲಕೋಟ ಮತ್ತು ಸಮೀಪದ ಪ್ರದೇಶದಲ್ಲಿ ಭಾರತ ವಾಯುಸೇನೆ ದಾಳಿ ನಡೆಸಿದ ಪ್ರದೇಶಗಳ ಚಿತ್ರಗಳನ್ನು ಕೂಡ ಬಿಡುಗಡೆಗೊಳಿಸಿದ್ದಾರೆ. ಇದೇ ಚಿತ್ರಗಳೊಂದಿಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ವರದಿ ಪ್ರಕಟಿಸಿದೆ.
ಭಾರತದ ವಾಯುದಾಳಿಯಿಂದ ಸಾವು ನೋವು, ಹಾನಿ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ಫೆಬ್ರವರಿ 14ರ ಪೂಲ್ವಾಮ ಭಯೋತ್ಪಾದನಾ ದಾಳಿಯ ಬಳಿಕ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಪಾಕಿಸ್ತಾನವನ್ನು ಭಯೋತ್ಪಾದಕ ದಾಳಿಯ ಹೊಣೆಗಾರನೆಂದು ಭಾರತ ಆರೋಪಿಸಿದೆ. ಆದರೆ ಪಾಕಿಸ್ತಾನ ಸಾಕ್ಷ್ಯವನ್ನು ಒದಗಿಸುವಂತೆ ಕೋರಿತ್ತು.
ಪಾಕಿಸ್ತಾನದ ವಿದೇಶ ಸಚಿವ ಪಾಕಿಸ್ತಾನದ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ನಾವು ಜನರಿಗೆ ತಪ್ಪು ಮಾಹಿತಿ ನೀಡಲು ಬಯಸುವುದಿಲ್ಲ. ಅಪಾಯದ ಕಾರ್ಮೋಡ ಹರಡಿದೆ. ನಾವು ಜಾಗೃತರಾಗಿದ್ದೇವೆ ಎಂದು ಹೇಳಿದರು.
ನಾವು ದೇಶದ ಜವಾಬ್ದಾರಿಯನ್ನು ಹೊತ್ತಿದ್ದೇವೆ ಅದನ್ನು ಮುಂದುವರಿಸುತ್ತಿದ್ದೇವೆ. ಆದರೆ ಭಾರತ ಸರಕಾರ ಈಗ ರಾಜಕೀಯ ಆಟ ಆಡುತ್ತಿದೆ. ತನ್ನ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಇದೆಲ್ಲವನ್ನು ಅವರು ಬಯಸಿದ್ದಾರೆ ಎಂದು ಕುರೇಶಿ ಹೇಳಿದರು. ಪಾಕಿಸ್ತಾನ ಸ್ವರಕ್ಷಣೆ ಮಾಡಿಕೊಳ್ಳುತ್ತದೆ ಮತ್ತು ತನ್ನ ಜನರನ್ನು ರಕ್ಷಿಸುತ್ತದೆ ಎಂದು ಕೂಡ ಹೇಳಿದರು.
ಇದೇ ವೇಳೆ ಪಾಕಿಸ್ತಾನದ ವಿಶ್ಲೇಷಣಕಾರ ಬ್ರಿಗೇಡಿಯರ್(ನಿವೃತ್ತ) ಹಾರಿಸ್ ನವಾಝ್ ಭಾರತದ ಸೇನೆ ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಅವರು ಮೂರು ನಾಲ್ಕು ಮೈಲುಗಳಷ್ಟು ಪಾಕಿಸ್ತಾನದ ಒಳಗೆ ಬಂದಿದ್ದಾರೆ. ಅವರು ಬಾಂಬುಗಳನ್ನು ಅಲ್ಲಿ ಸುರಿಸಿದ್ದಾರೆ. ಈ ಘಟನೆಯಿಂದ ಪಾಕಿಸ್ತಾನ ಉದ್ರಿಕ್ತಗೊಂಡು ಅತಿಕ್ರಮಣಕ್ಕೆ ಮುಂದಾಗಲಿ ಎಂದು ಅವರು ಬಯಸುತ್ತಿದ್ದಾರೆ. ಆದರೆ ಅದರಲ್ಲಿ ಭಾರತ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.












