ಖದೀಜ ನುಸ್ರತ್, ಅಬುಧಾಬಿ
ಮಹ್ರ್ ಎನ್ನುವುದು ವಿವಾಹದ ಸಮಯದಲ್ಲಿ ವರನು ವಧುವಿಗೆ ನೀಡುವಂತಹ ಉಡುಗೊರೆಯಾಗಿದೆ. ಇಸ್ಲಾಮ್ ಧರ್ಮವು ಮಹ್ರ್ ಕಡ್ಡಾಯಗೊಳಿಸಿ ಸ್ತ್ರೀಯ ಸ್ಥಾನಮಾನವನ್ನು ಉನ್ನತಗೊಳಿಸಿದೆ. ಮಹ್ರ್ ಆಗಿ ನೀಡಿದ ಸಂಪತ್ತು ವಿವಾಹದ ನಂತರ ಸ್ತ್ರೀಯ ಒಡೆತನದಲ್ಲಿರುವುದು. ವಿವಾಹದ ಕರಾರು ಪತ್ರದಲ್ಲಿ ಮಹ್ರ್ ನ್ನು ನಮೂದಿಸಲಾಗುತ್ತದೆ. ಮಹ್ರ್ ವಧುವಿನ ಹಕ್ಕಾಗಿರುತ್ತದೆ ಮತ್ತು ಅವಳೇ ನಿಶ್ಚಯಿಸಬೇಕಾದ ವಿಷಯವಾಗಿದೆ. ಆದರೆ ಇಂದು ಮಹ್ರ್ ತೀರ್ಮಾನಿಸುವಲ್ಲಿ ವಧುವಿನ ಯಾವುದೇ ಪಾಲು ಇಲ್ಲದಂತಾಗಿದೆ. ಮಹ್ರ್ ಎನ್ನುವುದು ಮದುವೆ ಹಾಲ್ ನಲ್ಲಿ ತೊರಿಕೆಗಾಗಿ ಪ್ರದರ್ಶನಕ್ಕಿರುವ ವಸ್ತುವಾಗಿ ಮಾರ್ಪಡುತ್ತಿದೆ. ಸಾಲ ಮಾಡಿಯಾದರೂ ತಮ್ಮ ಜನರಿಗೆ ತೋರಿಸಲಿಕ್ಕಾಗಿ ದೊಡ್ಡ ಮೊತ್ತದ ಮಹ್ರ್ ನೀಡುವವರಿಗೂ ಕಡಿಮೆಯಿಲ್ಲ. ಸಾಲ ಮರುಪಾವತಿಯಾಗುವ ಮುಂಚೆಯೇ ಅದೆಷ್ಟೋ ವಿವಾಹಗಳು ವಿಚ್ಛೇದನೆಯಾಗುವುದನ್ನೂ ನಾವು ಕಾಣುತ್ತಿದ್ದೇವೆ.
ಪ್ರವಾದಿ(ಸ) ಹೇಳಿರುವರು: “ಸಣ್ಣ ಪ್ರಮಾಣದ, ಸುಲಭದಲ್ಲಿ ಪಾವತಿ ಮಾಡಬಲ್ಲದಂತಹ ಮಹ್ರ್ ಅತ್ಯುತ್ತಮ ಮಹ್ರ್ ಆಗಿದೆ.” ಮಹ್ರ್ ಯಾವಾಗಲೂ ನಮ್ಮ ಆರ್ಥಿಕ ಸಾಮರ್ಥ್ಯಕ್ಕನುಸಾರವಾಗಿರಬೇಕು. ಹಣ, ಒಡವೆ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನು ನೀಡಲು ಸಾಧ್ಯವಾಗದವರಿಗೆ ಅಭೌತಿಕ ವಸ್ತುಗಳನ್ನೂ ಮಹ್ರ್ ಆಗಿ ನೀಡಬಹುದಾಗಿದೆ. ಉಮ್ಮು ಸುಲೈಮ್(ರ) ರು ಅಬೂ ತಲ್ಹಾ(ರ)ರ ಇಸ್ಲಾಮ್ ಸ್ವೀಕಾರವನ್ನು ಮಹ್ರ್ ಆಗಿ ಸ್ವೀಕರಿಸಿದ್ದರು. ಇನ್ನೊಂದು ಸಂದರ್ಭದಲ್ಲಿ ಓರ್ವ ವ್ಯಕ್ತಿಯ ಬಳಿ ಮಹ್ರ್ ನೀಡಲು ಏನೂ ಇಲ್ಲದಿದ್ದಾಗ ಕುರ್ ಆನ್ ಅರಿತಿರುವುದನ್ನು ಮಹ್ರ್ ಆಗಿ ಸ್ವೀಕರಿಸಿ ವಿವಾಹವಾಗಲು ಪ್ರವಾದಿ ಮುಹಮ್ಮದ್(ಸ) ಅನುಮತಿ ನೀಡಿರುವರು ಎಂದು ಹದೀಸ್ ಗ್ರಂಥಗಳಲ್ಲಿ ವರದಿಯಾಗಿದೆ.
ಮೂಸಾ(ಅ) ರ ಮಹ್ರ್ ಏನಾಗಿತ್ತು? ಅವರು ತಮ್ಮ ಪತ್ನಿಯ ತಂದೆಯೊಂದಿಗೆ ಎಂಟು ಅಥವಾ ಹತ್ತು ವರ್ಷ ನೌಕರಿ ಮಾಡುವ ಶರತ್ತಿಗೆ ಬದ್ಧವಾಗಿದ್ದರು. “ನೀವು ಎಂಟು ವರ್ಷಗಳವರೆಗೆ ನನ್ನಲ್ಲಿ ನೌಕರಿ ಮಾಡಬೇಕೆಂಬ ಶರತ್ತಿನ ಮೇಲೆ ನಾನು ನನ್ನ ಈ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಸಲಿಚ್ಛಿಸುತ್ತೇನೆ. ಇನ್ನು ನೀವು ಹತ್ತು ವರ್ಷ ಪೂತಿಗೊಳಿಸಿ ಬಿಟ್ಟರೆ ಅದು ನಿಮ್ಮಿಷ್ಟ.” ಎಂಬ ಶರತ್ತಿಗೆ ಬದ್ಧವಾಗಿದ್ದರು. (ಅಲ್ ಕಸಸ್:27)
“ಸ್ತ್ರೀಯರಿಗೆ ‘ವಿವಾಹಧನ’ವನ್ನು ಆತ್ಮ ಸಂತೋಷದಿಂದ (ಕಡ್ಡಾಯವೆಂದರಿತು) ಪಾವತಿ ಮಾಡಿರಿ. ಅವರು ತಮ್ಮಿಷ್ಟದಿಂದ ವಿವಾಹಧನದ ಒಂದಂಶವನ್ನು ನಿಮಗೆ ಬಿಟ್ಟು ಕೊಟ್ಟರೆ, ನೀವು ಅದನ್ನು ಸಂತೋಷದಿಂದ ಅನುಭೋಗಿಸಿಕೊಳ್ಳಬಹುದು. (ಅನ್ನಿಸಾ: 4)”
ಹ. ಉಮರ್ ಬಿನ್ ಖತ್ತಾಬ್(ರ) ಹೇಳಿದರು: ಕೇಳಿರಿ! ಸ್ತ್ರೀಯರಿಗೆ ದುಬಾರಿ ಮಹ್ರ್ ನಿಶ್ಚಯಿಸಬೇಡಿರಿ. ಯಾಕೆಂದರೆ ಇದು ಲೋಕದಲ್ಲಿ ಗೌರವಾರ್ಹ ವಸ್ತುವಾಗಿರುತ್ತಿದ್ದರೆ ಹಾಗೂ ಅಲ್ಲಾಹನ ದೃಷ್ಟಿಯಲ್ಲಿ ಧರ್ಮನಿಷ್ಠೆಯ ಕಾರ್ಯವಾಗಿರುತ್ತಿದ್ದರೆ ಅದಕ್ಕೆ ಅತಿ ಹೆಚ್ಚು ಅರ್ಹರು ಪ್ರವಾದಿ(ಸ) ಆಗಿರುತ್ತಿದ್ದರು. ಪ್ರವಾದಿ(ಸ) ಅವರು 12 ಊಕಿಯ (126 ತೊಲೆ ಬೆಳ್ಳಿ) ಕ್ಕಿಂತ ಹೆಚ್ಚು ಮಹ್ರ್ ಕೊಟ್ಟು ವಿವಾಹ ಮಾಡಿದ್ದಾಗಲಿ, ತಮ್ಮ ಪುತ್ರಿಯರ ಪೈಕಿ ಯಾರದಾದರೂ ವಿವಾಹ ಮಾಡಿದ್ದಾಗಲಿ ನನಗೆ ತಿಳಿದಿಲ್ಲ.” (ಬುಖಾರಿ)
ಜಗತ್ತಿಗೆ ತೋರಿಸಲಿಕ್ಕಾಗಿ ಮಹ್ರ್ ನೀಡಬೇಡಿರಿ. ಮಹ್ರ್ ನ ಕುರಿತು ವಧುವಿನ ಸಂರಕ್ಷರೊಂದಿಗೆ ಸಮಾಲೋಚನೆ ನಡೆಸಿರಿ. ನೀವು ನೀಡುವ ಮಹ್ರ್ ನಿಂದ ವಧು ಸಂತೃಪ್ತಳಾದರೆ ಸಾಕು. ವಿವಾಹ ಮತ್ತು ಚಿನ್ನಾಭರಣಕ್ಕೆ ಸಂಬಂಧ ಕಲ್ಪಿಸಿ ವಿವಾಹವನ್ನು ದುಬಾರಿಯೂ, ಸಾಮನ್ಯ ಜನರ ಕೈಗೆಟುಕದಂತೆ ಮಾಡಬೇಡಿರಿ. ಕಡಿಮೆ ಖರ್ಚಿನ ವಿವಾಹವು ಸಮೃದ್ಧಿದಾಯಕವಾಗಿರುತ್ತದೆ. ವಿವಾಹದ ಉದ್ದೇಶ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಮಾಡೆಲ್ ನ ಚಿನ್ನ, ವಜ್ರ, ಮಾನಿಕ್ಯ ಅಥವಾ ಆಂಟಿಕ್ ಆಭರಣಗಳನ್ನು ಧರಿಸಿ ಪ್ರದರ್ಶನ ಮಾಡುವುದೂ ಅಲ್ಲ.
ಇಂದು ಜಗತ್ತಿನಲ್ಲಿ ಅದರಲ್ಲೂ ಅರಬ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಹ್ರ್ ನ ಬೇಡಿಕೆಯಿಂದಾಗಿ ಅದೆಷ್ಟೋ ಹೆಣ್ಣು ಮಕ್ಕಳು ಅವಿವಾಹಿತರಾಗಿ ಉಳಿದಿದ್ದಾರೆ. ಆದರೆ ಕರ್ನಾಟಕದಾದ್ಯಂತಹ ಈ ಪರಿಸ್ಥಿತಿ ಇಲ್ಲ. ಯಾರೂ ಹೆಚ್ಚಿನ ಮೊತ್ತದ ಮಹ್ರ್ ನ ಬೇಡಿಕೆ ಇಡುವುದಿಲ್ಲ. ಪತಿ ಆರ್ಥಿಕ ಸಂಕಷ್ಟದಲ್ಲಿರುವಾಗ ಮಹ್ರ್, ತವರು ಮನೆಯಿಂದ ತಂದ ಚಿನ್ನ, ಸ್ವಸಂಪಾದನೆ ಎಲ್ಲವನ್ನೂ ಪತಿಗೆ ನೀಡಿ ಸಹಕರಿಸುವಂತಹ ವಿಶಾಲ ಮನೋಭಾವ ಹೊಂದಿದ ಪತ್ನಿಯರೇ ಕಂಡು ಬರುತ್ತಾರೆ.
ಅಲ್ಲಾಹನು ಹೆಣ್ಣು ಹೆತ್ತ ತಂದೆ ತಾಯಿಯರನ್ನು ಅನುಗ್ರಹಿಸಿ ಗೌರವಿಸಿದನು. ಆದ್ದರಿಂದ ನೀವು ಕೂಡ ಗೌರವಿಸಿರಿ. ಅವರ ಆರ್ಥಿಕ ಭಾರವನ್ನು ಸಾದ್ಯವಾದಷ್ಟು ಕಡಿಮೆಗೊಳಿಸಿ ತಮ್ಮ ಹೆಣ್ಣು ಮಕ್ಕಳ ವಿವಾಹವು ಅವರಿಗೆ ಸಂತೋಷ ಹಾಗು ಪವಿತ್ರವಾದ ಗಳಿಗೆಯನ್ನಾಗಿ ಮಾಡಿರಿ. ನಿಮ್ಮ ಬಾಳ ಸಂಗಾತಿಯಾಗುವವಳಿಗೆ ವಸ್ತ್ರ ಮತ್ತು ಅಗತ್ಯವಿರುವುದನ್ನು ನೀವೇ ಉಡುಗೊರೆಯಾಗಿ ನೀಡಿರಿ. ಅಥವಾ ಮಹ್ರ್ ಗೆ ಹಣವನ್ನೇ ಕೊಟ್ಟರೆ ಅವರಿಗೆ ಇಷ್ಟವಿರುವ ವಸ್ತ್ರಾಭರಣ ಖರೀದಿಸಲು ಸಹಾಯಕಾರಿಯಾಗಬಹುದು. ವಿವಾಹದ ಸಮಯದಲ್ಲಿ ಬಟ್ಟೆ ಬರೆಗಿಂತ ಅಗತ್ಯದ ವಸ್ತು ಬೇರೆ ಯಾವುದೂ ಇಲ್ಲ. ಅರಬ್ ಸ್ತ್ರೀಯರು ಮಹ್ರ್ ಗೆ ಹಣವನ್ನು ಕೇಳಿ ಪಡೆಯುತ್ತಾರೆ. ಈ ಹಣದಿಂದಲೇ ವಿವಾಹದ ವಸ್ತ್ರ ಮತ್ತು ಆಭರಣವನ್ನು ಖರೀದಿಸುತ್ತಾರೆ.
ನಮ್ಮಲ್ಲಿ ವಿವಾಹದ ಸಮಯದಲ್ಲಿ ಚಿನ್ನವನ್ನು ಡಿಮಾಂಡ್ ಮಾಡುವ ಪದ್ಧತಿ ಕಡಿಮೆಯಾಗಿದ್ದರೂ ಹೆಚ್ಚಿನವರಿಗೆ ತಮ್ಮ ಮನೆಗೆ ಬರುವ ಸೊಸೆ ಹೊಸ ಡಿಸೈನ್ ಚಿನಾಭರಣವನ್ನು ಹಾಕಿಕೊಂಡು ಬರಬೇಕೆಂಬ ಹಂಬಲವಿರುತ್ತದೆ. ವರನ ಕಡೆಯಿಂದ ಸಿಗುವ ಮಹ್ರ್ 5-10 ಪವನ್ ಚಿನ್ನ, ಆದರೆ ವಧು ತವರು ಮನೆಯಿಂದ 25- 50 ಪವನ್ ಚಿನ್ನ ತರಬೇಕೆಂಬ ಆಸೆ ಇರುತ್ತದೆ. ಸಾಮಾನ್ಯ ಮನುಷ್ಯನ ಬುದ್ಧಿಯು ಇದನ್ನು ನ್ಯಾಯವೆಂದು ಒಪ್ಪುತ್ತದೆಯೇ? ಮದುಮಗಳು ತೆಗೆದುಕೊಂಡು ಬಂದ ಚಿನ್ನ ಕಡಿಮೆಯಾಗಿದೆ, ಹಳೆ ಮಾಡೆಲ್ ಎಂದು ಹೇಳಲು ಹೇಸದ ಸ್ತ್ರೀಯರೂ ಇದ್ದಾರೆ. ನಿಮ್ಮ ವಿವಾಹ ಅಥವಾ ನಿಮ್ಮ ಹೆಣ್ಣು ಮಕ್ಕಳ ವಿವಾಹದ ಸಮಯದಲ್ಲಿ ಮೈತುಂಬಾ ಚಿನ್ನಾಭರಣ ಖರೀದಿಸಿದ್ದೀರಾ ? ಚಿನ್ನ ಖರೀದಿಸುವುದು ಎಷ್ಟು ಕಷ್ಟವೆಂದು ನೀವೆಂದಾದರೂ ಚಿಂತಿಸಿದ್ದೀರಾ? ತಮ್ಮ ಮನೆಯಲ್ಲಿಯೂ ಹೆಣ್ಣುಮಕ್ಕಳಿದ್ದಾರೆ, ಅವರ ವಿವಾಹದ ಸಂದರ್ಭದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಹೇಗಿರಬಹುದೆಂದು ಆಲೋಚಿಸಿದ್ದೀರಾ?
ಹೆಣ್ಣು ಮಕ್ಕಳು ಅಥವಾ ಸಹೋದರಿಯರನ್ನು ಪೋಷಿಸಿ, ಅವರಿಗೆ ಶಿಕ್ಷಣ ತರಭೇತಿಗಳನ್ನು ನೀಡಿ ವಿವಾಹ ಮಾಡಿಸಿದವರಿಗೆ ಪ್ರವಾದಿ ಮುಹಮ್ಮದ್(ಸ) ಸ್ವರ್ಗದ ಸುವಾರ್ತೆ ನೀಡಿರುವರು. ಆದರೆ ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಚಿಂತಿತರಾಗಿ ಇಂದು ಅದೆಷ್ಟೋ ಮಂದಿ ಹೆಣ್ಣು ಮಕ್ಕಳಾಗುವುದನ್ನು ಇಚ್ಛಿಸುವುದಿಲ್ಲ. ಅನುಗ್ರಹವಾದ ಹೆಣ್ಣು ಮಕ್ಕಳನ್ನು ಶಾಪವೆಂದು ಪರಿಗಣಿಸುವವರಿದ್ದಾರೆ. ದುಬಾರಿಯಾಗುತ್ತಿರುವ ಚಿನ್ನದ ಬೆಲೆಯಿಂದಾಗಿ ಹೆಣ್ಣು ಮಕ್ಕಳ ತಂದೆತಾಯಂದಿರು ತಮ್ಮ ಮಕ್ಕಳ ವಿವಾಹದ ಬಗ್ಗೆ ಚಿಂತಿತರಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಹೆಣ್ಣು ಮಕ್ಕಳ ಮದುವೆಗೆ ಉಳಿತಾಯ ಮಾಡಿಟ್ಟವರಿಗೆ ಮಾತ್ರ ವಿವಾಹವು ಸಂತೋಷದಾಯಕವಾಗಿರುತ್ತದೆ. ಅದರಲ್ಲೂ ಹೆಚ್ಚಿನ ಹೆತ್ತವರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಉಳಿತಾಯ ಮಾಡುತ್ತಾರೆ.ಎಂದು
ಮದುವೆ ಸಮಾರಂಭಗಳಲ್ಲಿ ಆಹಾರ, ವಸ್ತ್ರದಂತೆ ಚಿನ್ನಾಭರಣವು ಮೂಲಭೂತ ಬೇಡಿಕೆಯಾಗಿರುವುದಿಲ್ಲ. ಅದು ಲೌಖಿಕ ಜೀವನದ ಸೊಬಗು ಮಾತ್ರ. ಆಭರಣ ಧರಿಸುವುದರಿಂದ ದಾಂಪತ್ಯ ಜೀವನ ?ಸುಖಮಯವಾಗಬಹುದೆಂದು. ಆಭರಣವನ್ನು ಧರಿಸುವ ಉದ್ದೇಶ ಸೌಂದರ್ಯವನ್ನು ವರ್ಧಿಸುವುದು. ಫ್ಯಾನ್ಸಿಯಲ್ಲಿ ಲಭ್ಯವಿರುವುದನ್ನು ಧರಿಸಿದರೂ ಸಾಕಾಗುತ್ತದೆ. ಮನೆಯಲ್ಲಿ ಬಡತನ, ಹಸಿವು, ಇನ್ನಾವುದೇ ಸಮಸ್ಯೆ ಅಥವಾ ಮೂಲಭೂತ ಬೇಡಿಕೆಗಳ ಅಗತ್ಯವಿರುವಾಗ ಚಿನ್ನ ಖರೀದಿಸಲು ಸಾಧ್ಯವಾಗುತ್ತದೆಯೇ? ಅಂತಹ ಸಂದರ್ಭದಲ್ಲಿ ಚಿನ್ನ ಧರಿಸುವ ಆಸೆ ಇರುತ್ತದೆಯೇ? ಚಿನ್ನವೆಂಬುದು ಹೆಚ್ಚಿನ ಸ್ತ್ರೀಯರಲ್ಲಿ ಕೆಲವು ಸಮಯದವರೆಗೆ ಮಾತ್ರ ಇರುತ್ತದೆ. ನಂತರ ಅಗತ್ಯವಿರುವಾಗ ಬ್ಯಾಂಕ್ ನಲ್ಲಿ ಅಡವು ಇಡುವವರೂ ಅಥವಾ ಮಾರಾಟ ಮಾಡುವವರೇ ಹೆಚ್ಚು. ಆದುದರಿಂದ ಆಭರಣದ ವಿಷಯದಲ್ಲಿ ಹೆಣ್ಣು ಹೆತ್ತವರಿಗೆ ಕಿರುಕುಳ ನೀಡಬೇಡಿರಿ. ವಿವಾಹದ ಆರಂಭದ ದಿನಗಳಲ್ಲಿ ವಧು ಅಥವಾ ಅವಳ ಮನೆಯವರಿಗೆ ಮನನೋಯಿಸುವ ಮಾತುಗಳಿಂದ ಕಳೆದುಕೊಂಡ ಮಾನವು ಮತ್ತೆಂದೂ ಹಿಂದೆ ಸಿಗಲಾರದು.












