ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಬೆಂಕಿ ಅವಘಡ : 26 ಮಂದಿ ದಾರುಣ ಸಾವು; ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ

0
390

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ನಾಲ್ಕಂತಸ್ತಿನ ಕಟ್ಟಡದಲ್ಲಿ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಕನಿಷ್ಠ 26 ಜನರು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ‌.

ಕಟ್ಟಡದಿಂದ ಸುಮಾರು 60-70 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, 25 ಅಗ್ನಿಶಾಮಕ ವಾಹನಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 40ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲ ಕಂಪನಿಗಳ ಕಚೇರಿಗಳು ಬೆಂಕಿಗೆ ತುತ್ತಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಘಟನೆಯಲ್ಲಿ ಈವರೆಗೆ 26 ಮೃತದೇಹಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸಂಖ್ಯೆ ಹೆಚ್ಚಾಗಬಹುದೆಂಬ ಆತಂಕದಲ್ಲಿದ್ದಾರೆ. ಒಂದು ಮಹಡಿಯಲ್ಲಿ ಇನ್ನೂ ಶೋಧಿಸಬೇಕಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಡಿಸಿಪಿ ಸಮೀರ್ ಶರ್ಮಾ, “ಇದೊಂದು ದೊಡ್ಡ ದುರಂತ. 26 ಮೃತದೇಹಗಳು ದೊರೆತಿರುವುದು ದೃಢಪಟ್ಟಿವೆ” ಎಂದು ತಿಳಿಸಿದ್ದಾರೆ.

ಕಟ್ಟಡ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರಪತಿ ರಾಮ್‌ ನಾಥ್ ಕೋವಿಂದ್ ಟ್ವಿಟರ್ ಮೂಲಕ ದುರಂತಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಆಘಾತ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ದೆಹಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ಪ್ರಾಣಹಾನಿಯಾಗಿರುವುದು ಅತೀವ ದುಃಖ ತಂದಿದೆ. ದುಃಖಿತ ಕುಟುಂಬಗಳೊಂದಿಗೆ ನಾನಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಘಟನೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಮುಂದಿನ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ರೂ 50,000 ಪರಿಹಾರವನ್ನು ನೀಡಲಾಗುವುದು ಎಂದು ಪ್ರಧಾನಿ ಕಚೇರಿ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.