ಸನ್ಮಾರ್ಗ ವಾರ್ತೆ
✍️ ಸುಪ್ರಿಯ ಶ್ರೀನಾತೆ
ಅನು: ಮುಹಮ್ಮದ್ ಮರಕಡ
ಈ ವಿಷಯ ಪ್ರತಿಯೊಂದು ದೃಶ್ಯ ಮಾಧ್ಯಮಗಳಲ್ಲಿ ಚರ್ಚೆಯಾಗಬೇಕು. ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಬೇಕು. ಪ್ರಬುದ್ಧ ಪತ್ರಕರ್ತರು ಈ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು. ಮತ್ತು ಪ್ರಧಾನಿ ಮೋದಿಯವರ ಮೌನವನ್ನು ಮುರಿಯಬೇಕು.
ಇದೊಂದು ದೊಡ್ಡ ಹಗರಣಗಳ ವಿಷಯ. ಸರ್ಕಾರದ ಲೆಕ್ಕ ಪರಿಶೋಧಕ ಸಂಸ್ಥೆಯಾದ ಸಿಎಜಿ ಮೋದಿ ಹಗರಣಗಳನ್ನು ಬಯಲಿಗೆಳೆದಿದೆ. ಸಿಎಜಿ ಎಂಬುದು ಸರ್ಕಾರದ ಎಲ್ಲಾ ಖರ್ಚು ವೆಚ್ಚಗಳನ್ನು ಲೆಕ್ಕಪರಿಶೋಧನೆ ಮಾಡುತ್ತದೆ. ಇದು ಏಳು ಮಹಾ ಹಗರಣಗಳನ್ನು ಕೆಲವು ದಿನಗಳ ಹಿಂದೆ ಬಯಲು ಮಾಡಿದೆ.
ಇತ್ತೀಚೆಗೆ ನಡೆದಂತಹ ಈ ದೊಡ್ಡ ದೊಡ್ಡ ಹಗರಣಗಳು ಸರಕಾರಕ್ಕೆ ಮಾತ್ರವಲ್ಲ, ಸಾಮಾನ್ಯ ಜನರ ಕಿಸೆಗೂ ಕತ್ತರಿ ಬಿದ್ದಿದೆ ಎಂಬುದನ್ನು ನೆನಪಿಸಬೇಕು. ಮೋದಿಯವರು ಸಾಕಷ್ಟು ಹಣವನ್ನು ಖರ್ಚು ಮಾಡಿ ಮಾಧ್ಯಮ ಪ್ರಚಾರದ ಮೂಲಕ ತಮ್ಮ ತಮ್ಮನ್ನು ಪ್ರಾಮಾಣಿಕ ಎಂದು ಬಿಂಬಿಸಿಕೊಂಡರು. ಈಗ ಸಿಎಜಿ ವರದಿಯು ಈ ಚಿತ್ರಣವನ್ನು ಸಂಪೂರ್ಣವಾಗಿ ಸಿಡಿಸಿಬಿಟ್ಟಿದೆ.
ಪ್ರಪ್ರಥಮವಾಗಿ ಭಾರತ್ ಮಾಲಾ ಯೋಜನೆ. ಎಪ್ಪತ್ತು, ಎಪ್ಪತೈದು ಸಾವಿರ ಕಿಲೋಮೀಟರ್ ರಸ್ತೆಯನ್ನು ನಿರ್ಮಿಸಲಿಕ್ಕಾಗಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಹಣವನ್ನು ನೀಡಿದೆ. ಅದರ ಅಧ್ಯಕ್ಷರು ಸ್ವತಃ ಪ್ರಧಾನಿಯವರೇ ಆಗಿದ್ದಾರೆ. ಅಲ್ಲದೆ ಹಣ ಹೇಗೆ ಖರ್ಚಾಗಿದೆ ಎಂದು ನಿಗಾ ವಹಿಸುವವರೂ ಆವರೇ ಆಗಿರುತ್ತಾರೆ.
15 ಕೋಟಿ 37 ಲಕ್ಷ ರೂಪಾಯಿಗಳಲ್ಲಿ 1 ಕಿಲೋ ಮೀಟರ್ ರಸ್ತೆ ನಿರ್ಮಿಸಬೇಕಾಗಿತ್ತು. ಆದರೆ ಇದೇ ಖರ್ಚನ್ನು 32 ಕೋಟಿ 17 ಲಕ್ಷ ಎಂದು ಖರ್ಚನ್ನು ದುಪ್ಪಟ್ಟು ಮಾಡಿ ತೋರಿಸಲಾಗಿದೆ. ಇದು ಪ್ರಧಾನಿಯವರ ಮೇಲ್ನೋಟದಲ್ಲಿ ಭಾರತ ಸರಕಾರದ ಕಣ್ಣ ಮುಂದೆ ನಡೆದಿದೆ. ನಕಲಿ ದಾಖಲೆಗಳ ಆಧಾರದ ಮೇಲೆ ಬಿಲ್ಡರ್ ಗಳ ಆಯ್ಕೆಯನ್ನು ಮಾಡಿರುವುದು ಕಂಡು ಬಂದಿದೆ. ಕಟ್ಟಡ ನಿರ್ಮಾಣ ಪ್ರಕ್ರಿಯೆಯಲ್ಲಿ ದೊಡ್ಡ ವಂಚನೆಗಳು ಬೆಳಕಿಗೆ ಬಂದಿವೆ. ಅಲ್ಲದೆ ವಿಸ್ತೃತ ಯೋಜನಾ ವರದಿಯಲ್ಲಿ ಕಾಮಗಾರಿಗಳು ಅಪೂರ್ಣವಾಗಿರುವುದು ಕಂಡು ಬಂದಿದೆ. ಖಾತೆಯಿಂದ ಸುಮಾರು 3:30 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಮತ್ತು ನಾಗರಿಕರ ಸುರಕ್ಷತೆಗಾಗಿ ರಸ್ತೆ ನಿರ್ಮಿಸುವಾಗಲೆಲ್ಲ ಸುರಕ್ಷತಾ ಸಲಹೆಗಾರರನ್ನು ನೇಮಿಸುವುದು ಕಡ್ಡಾಯ. ಆದರೆ ಸರಕಾರ ಇದನ್ನು ಪರಿಗಣಿಸಲಿಲ್ಲ. ಒಬ್ಬನೇ ಒಬ್ಬ ಸುರಕ್ಷತಾ ಸಲಹೆಗಾರನೂ ಇರಲಿಲ್ಲ. ಆದ್ದರಿಂದ ನೀವು ಸುಮಾರು 70000 ಕಿಲೋಮೀಟರ್ಗಳ ಭಾರತಮಾಲಾ ರಸ್ತೆಯಲ್ಲಿ ಸಂಚರಿಸುವುದಾದರೆ, ನಿಮ್ಮ ಜೀವ, ನಿಮ್ಮ ಸರಕುಗಳ ಸುರಕ್ಷತೆಗೆ ನೀವೇ ಹೊಣೆಗಾರರು. ಇದರ ಟೆಂಡರ್ ಯಾರಿಗೆ ಕೊಟ್ಟಿದ್ದಾರೋ ದೇವರೇ ಬಲ್ಲ.
ದ್ವಾರಕಾ ಎಕ್ಸ್ಪ್ರೆಸ್ ವೇ ನಿರ್ಮಿಸಲು ಪ್ರತಿ ಕಿಲೋಮೀಟರ್ಗೆ 18 ಕೋಟಿ ಅನುಮೋದಿಸಲಾಗಿತ್ತು. ‘ಬಹಳ ಸುಂದರವಾಗಿ ನಿರ್ಮಿಸಿದ್ದೇವೆ’ ಎಂದು ಸರಕಾರ ಹೇಳುತ್ತದೆ. ಅದರ ಖರ್ಚು ಕಿಲೋ ಮೀಟರ್ಗೆ 250 ಕೋಟಿ ರೂಪಾಯಿ.
ಮೂರನೆಯದ್ದು, ಟೋಲ್ನಲ್ಲಿ ಲೂಟಿ ಮಾಡಿದ ಹಣದಲ್ಲಿ ಕಮಿಷನರ್ ತಿನ್ನುತ್ತಾರೆ. ಇಂದು ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವುದಾದರೆ 6000 ರೂ. ಟೋಲ್ ನೀಡಬೇಕಾಗಿದೆ. ಟೋಲ್ ಬಳಿ ಅಥವಾ ಟೋಲ್ ಇರುವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದರೆ ಟೋಲ್ ವೆಚ್ಚದಲ್ಲಿ 75% ರಷ್ಟು ರಿಯಾಯಿತಿ ನೀಡಬೇಕು ಎಂದು RTO ನ ನಿಯಮವಿದೆ. ಸಿಎಜಿ ಕೇವಲ ಐದು ಟೋಲ್ ಪ್ಲಾಜಾಗಳ ಲೆಕ್ಕಪರಿಶೋಧನೆಯ ಸಮೀಕ್ಷೆಯನ್ನು ನಡೆಸಿದಾಗ ಜನರಿಂದ ಸುಮಾರು 132 ಕೋಟಿ ಅಕ್ರಮವಾಗಿ ವಸೂಲಿ ಮಾಡಲಾಗಿದೆ ಎಂದು ಕಂಡು ಬಂದಿದೆ. ಹಾಗಾದರೆ ಇಡೀ ದೇಶದಲ್ಲಿರುವ ಟೋಲ್ ಪ್ಲಾಜಾಗಳ ಲೆಕ್ಕಪರಿಶೋಧನೆ ಮಾಡಿದರೆ ಎಷ್ಟು ಲಕ್ಷ ಕೋಟಿ ಸುಲಿಗೆ ಮಾಡಿರಬಹುದು? ಈ ರಸ್ತೆಯಲ್ಲಿ ಪ್ರಯಾಣಿಸುವವರು ಮಧ್ಯಮ ವರ್ಗದವರು, ಕೆಳ ವರ್ಗದವರು, ಬಡವರು ಮುಂತಾದವರು ಎಂಬುದನ್ನು ಮರೆಯಬಾರದು.
ಇವೆಲ್ಲ, ಆಯುಷ್ಮಾನ್ ಭಾರತ್: ಲೋಕ ಸಭೆಯಲ್ಲಿ ಇದರದ್ದೇ ಚರ್ಚೆ ನಡೆಯುತ್ತಿದೆ. ಈ ಯೋಜನೆಯಲ್ಲಿ ನರೇಂದ್ರ ಮೋದಿ ಯವರೇ ಕಾಣುತ್ತಿದ್ದಾರೆ. ಇದು ಹಗರಣದ ಯೋಜನೆ ಯಾಗಿದೆ. ಇಲ್ಲಿ ಆಧಾರ್, ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ನೋಂದಾಣಿ ಮಾಡಲಾಗುತ್ತದೆ. ಆಶ್ಚರ್ಯವೆಂದರೆ ಒಂದೇ ಸಂಖ್ಯೆಯಲ್ಲಿ 7.30 ಲಕ್ಷ ಜನರ ನೋಂದಣಿ ಮಾಡಿಸಲಾಗಿದೆ. ಇದಷ್ಟೇ ಅಲ್ಲ, ಆಯುಷ್ಮಾ ನ್ ಭಾರತ್ ಅಡಿಯಲ್ಲಿ ಸರಿ ಸುಮಾರು 88000 ಮೃತರ ಚಿಕಿತ್ಸೆಯನ್ನು ಮಾಡಿರುವ ಲೆಕ್ಕವನ್ನು ತೋರಿಸಿ ಅವರ ಹಕ್ಕಿನ ಮೊತ್ತವನ್ನು ಪಡೆಯಲಾಗಿದೆ. ಆ ಮೊತ್ತ ಯಾರಿಗೆ ತಲುಪಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಅರ್ಹರಿಗೆ ಖಂಡಿತ ತಲುಪಲಿಲ್ಲ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಭೂಮಿ ಖರೀದಿಯಲ್ಲಿ ದಲ್ಲಾಳಿಗಳಾಗಿ ಭಾರತೀಯ ಜನತಾ ಪಕ್ಷದ ನಾಯಕರು, ಎಸ್ಡಿಎಂ ಕಾನೂನು, ಎಲ್ಲಾ ದೊಡ್ಡ ನಾಯಕರು ಮತ್ತು ಟ್ರಸ್ಟ್ ನ ಜನರು ಒಟ್ಟಾಗಿ ಶಾಮೀಲಾಗಿದ್ದರೂ ಸರಕಾರ ಒಂದೇ ಒಂದು ಶಬ್ದವನ್ನೂ ಹೇಳಿಲ್ಲ.
ಅಯೋಧ್ಯೆಯ ಅಭಿವೃದ್ಧಿ ಯೋಜನೆಯಲ್ಲಿಯೂ ದೊಡ್ಡ ಮಟ್ಟದ ಹಗರಣ ನಡೆಯುತ್ತಿರುವುದು ಕಂಡು ಬರುತ್ತಿದೆ. ನಾಗರಿಕರಿಂದ ಜಮಾ ಮಾಡಿದ ಮೊತ್ತವು ಗುತ್ತಿಗೆದಾರರ ಕೈಸೇರುವುದ ಕಂಡು ಬರುತ್ತಿದೆ. ದೇವರ ಹೆಸರಿನಲ್ಲಿ ನಡೆಯುವ ಲೂಟಿ ಇದು. ಕಡಿಮೆ ಬೆಲೆಯಲ್ಲಿ ಜಮೀನು ಖರೀದಿಸಿ ದುಬಾರಿ ಬೆಲೆಗೆ ಟ್ರಸ್ಟಿಗೆ ನೀಡಲಾಗಿದೆ. ರಾಮನ ಹೆಸರಿನಲ್ಲಿ ಈ ಭಕ್ತರು ಅಪಾರ ಸಂಪತ್ತನ್ನು ಪಡೆದರು. ಅಯೋಧ್ಯಾ ಅಭಿವೃದ್ಧಿ.
ಗ್ರಾಮೀಣಾಭಿವೃದ್ಧಿ ಸಚಿವಾಲಯ. ಜನರಿಗೆ ಪಿಂಚಣಿ ನೀಡುವ ಕಾರ್ಯ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ನಡೆಯುತ್ತದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲರ ವೇತನ ವನ್ನು ಇಲ್ಲಿಂದೇ ಹಂಚಲಾಗುತ್ತಿದೆ. ಯಾವುದೇ ಒಂದು ಪ್ರದೇಶಕ್ಕೆ ಹೋದರೆ ‘ನಮ್ಮ ಪಿಂಚಣಿ ಇನ್ನೂ ಬಂದಿಲ್ಲ’ ಎಂದು ಹೇಳುವ ಕನಿಷ್ಟ 10 ಜನ ಸಿಗುವರು. ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದರೂ ಅದಕ್ಕೆ ಉತ್ತರವಾಗಿ ‘ಫಂಡ್ ಇಲ್ಲ’ ಎಂದು ಹೇಳುತ್ತಾರೆ. ಕಾರಣ ಏನೆಂದರೆ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ, ವಿಧವಾ ವೇತನದ ಹಣವನ್ನು ಇತರ ಯೋಜನೆಗಳ ಪ್ರಚಾರಕ್ಕಾಗಿ ವ್ಯಯಿಸಲಾಗುತ್ತಿದೆ. ಅರ್ಹರ ಖಾತೆಗೆ ಸೇರಬೇಕಾದ ಮೊತ್ತವು 21 ರಾಜ್ಯಗಳ ಪ್ರತಿ ಜಿಲ್ಲೆಗಳಲ್ಲಿ ಗ್ರಾಮ ಸಮೃದ್ಧಿ, ಸ್ವಚ್ಛ ಭಾರತ ಪ್ರಚಾರ ಫಲಕಗಳನ್ನು ಹಾಕಲು ಖರ್ಚು ಮಾಡಲಾಗಿದೆ ಎಂದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಸಿಎಜಿಯು ವಿಮಾನದ ಇಂಜಿನ್ಗಳ ವಿನ್ಯಾಸ ಉತ್ಪಾದನೆಯಲ್ಲಿನ ಲೋಪದೋಷಗಳ ಕುರಿತು ಗಂಭೀರ ಆರೋಪ ಮಾಡಿದ್ದು, ಇದರಿಂದ ಆದಾಯಕ್ಕೆ ಸುಮಾರು 154 ಕೋಟಿ ರೂಪಾಯಿ ನಷ್ಟವಾಗಿದೆ.
ಪ್ರಧಾನಿಯವರ ಮೇಲ್ನೋಟದಲ್ಲಿ ನಡೆಯು ತ್ತಿರುವ ಈ ಯೋಜನೆಯಲ್ಲಿ ನಿರೀಕ್ಷೆಗೂ ಮೀರಿ ಹಗರಣಗಳು ನಡೆಯುತ್ತಿದ್ದರೂ ಪ್ರಧಾನಿಯವರು ಯಾಕೆ ಮೌನವಾಗಿದ್ದಾರೆ? ಇಲ್ಲವೇ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಹೆದ್ದಾರಿಗಳು ಮತ್ತು ಸಚಿವಾಲಯದ ವಿರುದ್ಧ, ಆಯುಷ್ಮಾನ್ ಭಾರತ್ನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಪ್ರಧಾನಿ ಏನಾದರೂ ಮಾಡುತ್ತಾರೆಯೇ? ಫಲಾನುಭವಿಗಳ ಹಣವನ್ನು ಯಾರು ದುರುಪಯೋಗಪಡಿಸಿದ್ದಾರೆ ಎಂಬುದನ್ನು ಅವರು ಕಂಡುಹಿಡಿಯಲು ಪ್ರಯತ್ನಿಸುತ್ತಾರೆಯೇ? ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಣವನ್ನು ಇತರ ಯೋಜನೆಗಳಿಗೆ ಏಕೆ ಖರ್ಚು ಮಾಡುತ್ತಿದ್ದಾರೆ?. ಅಯೋಧ್ಯೆಯಲ್ಲಿ ಭೂ ಅಕ್ರಮ ನಡೆದ ನಂತರ ಅಯೋಧ್ಯೆ ಅಭಿವೃದ್ಧಿ ಯೋಜನೆಯಲ್ಲಿ ಹಗರಣಗಳು ನಡೆಯುತ್ತಿವೆ ಮತ್ತು ಅದರ ಲಾಭವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎಂದು ತಿಳಿಯಲು ಪ್ರಧಾನಿ ಏನಾದರೂ ಪ್ರಯತ್ನಿಸುತ್ತಾರೆಯೇ? ಒಂದು ಕಾಲದಲ್ಲಿ ಸಿಎಜಿಯ ಹೆಸರು ಕೇಳಿದಾಗ ಮಾಧ್ಯಮದವರಿಗೆ ಆಘಾತವಾಗುತ್ತಿತ್ತು. ಆದರೆ ಅವರು ಈಗ ಮೌನ ವಹಿಸಿದ್ದಾರೆ. ಪ್ರಧಾನಿ ಕೂಡ ಮೌನವಾಗಿದ್ದಾರೆ. ಆದರೆ ಲಾಭಕೋರ ಕಮಿಷನ್ ಮತ್ತು ಸಾರ್ವಜನಿಕ ಹಣದ ಲೂಟಿಯನ್ನು ಲೆಕ್ಕಪರಿಶೋಧಕರೇ ಬಹಿರಂಗ ಪಡಿಸುತ್ತಿದ್ದಾರೆ. ಆದರೆ ಮೋದಿಯವರು ಉತ್ತರಿಸುವುದಿಲ್ಲ. ಹಾಗಾಗಿ ಪ್ರಧಾನಿ ಮೋದಿ ಅವರು ತಕ್ಷಣ ಸಂಸ್ಥೆಯ ಮೇಲೆ ದಾಳಿ ಮಾಡಿ ಅವರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಮಾಡಬೇಕು.












