ಹೊಸದಿಲ್ಲಿ,ಎ.10: ಪತ್ರಕರ್ತೆ ಪ್ರಿಯಾ ರಮಣಿಯ ವಿರುದ್ಧ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ದಿಲ್ಲಿ ಕೋರ್ಟು ಆರೋಪ ಹೊರಿಸಿದೆ. ಆದರೆ ಪ್ರಿಯಾ ರಮಣಿ ಆರೋಪವನ್ನು ನಿರಾಕರಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮೇ ನಾಲ್ಕಕ್ಕೆ ಮುಂದೂಡಲಾಗಿದೆ. ಕೋರ್ಟಿನಲ್ಲಿ ನೇರ ಹಾಜರಾಗುವುದರಿಂದ ಪ್ರಿಯಾ ರಮಣಿಗೆ ವಿನಾಯತಿ ನೀಡಲಾಗಿದೆ.
ಎಂ.ಜೆ ಅಕ್ಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಮೀಟು ಅಭಿಯಾನದ ವೇಳೆ ಪ್ರಿಯಾ ರಮಣಿ ಆರೋಪಿಸಿದ್ದರು. ಪ್ರಿಯಾರ ನಂತರ ಹಲವಾರು ಮಂದಿ ಸಮಾನ ಆರೋಪ ಹೊರಿಸಿದ್ದರು. ತದನಂತರ 2018 ಅಕ್ಟೋಬರ್ ಹದಿನೇಳಕ್ಕೆ ರಾಜೀನಾಮೆ ನೀಡಿದ್ದ ಎಂ.ಜೆ ಅಕ್ಬರ್, ಪ್ರಿಯಾ ರಮಣಿ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಕೋರ್ಟು ಆರೋಪ ಪಟ್ಟಿಯನ್ನು ಹೊರಿಸಲಾಗಿತ್ತು. ಫೆಬ್ರವರಿ 25ಕ್ಕೆ ಕೋರ್ಟು ಅವರಿಗೆ ಜಾಮೀನು ನೀಡಿತ್ತು.












