41 ಟಿಎಂಸಿ ಶಾಸಕರು ಬಿಜೆಪಿ ಸೇರಲು ಬಯಸಿದ್ದಾರೆ: ಕೈಲಾಶ್ ವಿಜಯವರ್ಗಿಯಾ

0
321

ಸನ್ಮಾರ್ಗ ವಾರ್ತೆ

ಪಶ್ಚಿಮ ಬಂಗಾಳ: ಈ ವರ್ಷದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲು ಬಿಜೆಪಿಗೆ ಸೇರಲು ಬಯಸುವ 41 ಶಾಸಕರ ಪಟ್ಟಿ ನನ್ನ ಬಳಿ ಇದೆ. ನಾನು ಈ ಶಾಸಕರನ್ನು ಬಿಜೆಪಿಯ ಮಡಿಲಿಗೆ ತೆಗೆದುಕೊಂಡರೆ ಮಮತಾ ಬ್ಯಾನರ್ಜಿ ಸರ್ಕಾರ ಕುಸಿಯುತ್ತದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ‌.

“ಈ ಶಾಸಕರ ಪೈಕಿ ಹಲವರ ಗುಣನಡತೆ ಉತ್ತಮವಾಗಿಲ್ಲವೆಂದು ಕಂಡುಬಂದಿದೆ. ಆದ್ದರಿಂದ ನಾವು ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳದಿರಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.

ಕೋವಿಡ್ -19 ವ್ಯಾಕ್ಸಿನೇಷನ್ ಕಾರ್ಯಕ್ರಮದ ಲಾಭ ತೆಗೆದುಕೊಳ್ಳಲು ಸಿಎಂ ಮಮತಾ ಬ್ಯಾನರ್ಜಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ವಿಜಯವರ್ಗಿಯಾ, ಬ್ಯಾನರ್ಜಿಯವರು ತಮ್ಮ ಸರ್ಕಾರದಿಂದ ರಾಜ್ಯಕ್ಕೆ ಉಚಿತವಾಗಿ ಚುಚ್ಚುಮದ್ದು ನೀಡುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಖರ್ಚನ್ನು ಭರಿಸುತ್ತಿದೆ ಎಂದವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳವು ‘ಹಿಂಸಾಚಾರದ ರಾಜಕೀಯ’ ಕಂಡಿದೆ. ಅಲ್ಲದೇ, ಬಿಜೆಪಿ ಕಾರ್ಯಕರ್ತರನ್ನು ಆಕ್ರಮಣಕಾರರು ಎಂದು ಬಿಂಬಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸೆ ಮಾಡಿದವರನ್ನು ಗುರುತಿಸುತ್ತದೆ ಮತ್ತು ಅವರ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಿದ್ದೇವೆ ಎಂದವರು ತಿಳಿಸಿದ್ದಾರೆ.