ಅಹ್ಮದಾಬಾದ್: ಹಾರ್ದಿಕ್ ಪಟೇಲ್ ಈಸಲದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಗುಜರಾತ್ ಹೈಕೋರ್ಟು 2015ರಲ್ಲಿ ಮೆಹಸಾಣದ ದಂಗೆ ಹರಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಲು ಸಲ್ಲಿಸಿದ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಜನಪ್ರತಿನಿಧಿ ಕಾಯಿದೆ -1951ರ ಪ್ರಕಾರ ಅವರ ವಿರುದ್ಧ ಆರೋಪ ಸಾಬೀತು ಆಗಿರುವುದರಿಂದ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಬುಧವಾರ ಹೈಕೋರ್ಟಿನಲ್ಲಿ ಅವರ ಅರ್ಜಿಯನ್ನು ಗುಜರಾತ್ ಸರಕಾರ ವಿರೋಧಿಸಿದೆ. ಹಾರ್ದಿಕ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರಿಂದ ತನ್ನ ವಿರುದ್ಧ ಪ್ರಕರಣವನ್ನು ರದ್ದುಪಡಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಗುಜರಾತ್ ಸರಕಾರದ ವಕೀಲ ಮಿತೇಶ್, ಹಾರ್ದಿಕ್ ಸಂಭಾವಿತ ವ್ಯಕ್ತಿಯಲ್ಲ ಅವರ ವಿರುದ್ಧ 17 ಪ್ರಕರಣಗಳಿವೆ ಎಂದು ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ.
2018ರಲ್ಲಿ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ಎರಡು ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ರಾಹುಲ್ ಗಾಂಧಿಯ ಉಪಸ್ಥಿತಿಯಲ್ಲಿ ಅವರು ಮಾರ್ಚ್ ಹನ್ನೆರಡರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಂತರ ಅವರು ಜಾಮ್ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ ಕಾಂಗ್ರೆಸ್ನಿಂದ ಈ ಕುರಿತು ಸ್ಪಷ್ಟ ನಿರ್ಧಾರ ಈವರೆಗೆ ಹೊರಬಿದ್ದಿಲ್ಲ. ಇದೇ ವೇಳೆ, ಕಾನೂನು ತೊಡಕು ಕೂಡ ಅವರನ್ನು ಕಾಡುತ್ತಿದೆ.












