ಪ.ಬಂಗಾಳದಲ್ಲಿ ವೆಲ್ಫೇರ್ ಪಾರ್ಟಿ ಕಣಕ್ಕೆ; ಜಂಗೀಪುರ ಕ್ಷೇತ್ರದಿಂದ ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್ ಸ್ಪರ್ಧೆ

0
1719

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದು, ಪಕ್ಷದ ಅಧ್ಯಕ್ಷರು ಹಾಗೂ ಜೆಎನ್‌ಯು ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರ ತಂದೆಯಾದ ಖಾಸಿಮ್ ರಸೂಲ್ ಇಲ್ಯಾಸ್ ರವರು ಚುನಾವಣಾ ಕಣಕ್ಕಿಳಿದಿದ್ದಾರೆ.

ಜಂಗೀಪುರ ಕ್ಷೇತ್ರದಿಂದ ಖಾಸಿಮ್ ಇಲ್ಯಾಸ್ ರವರು ಸ್ಪರ್ಧೆಗಿಳಿದಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಪುತ್ರ ಅಭಿನಿತ್ ರವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು‌. ಈ ಕ್ಷೇತ್ರದಿಂದ ಕಣಕ್ಕಿಳಿದ ಇಲ್ಯಾಸ್ ರವರು ಕ್ಷೇತ್ರದ ಅಭಿವೃದ್ಧಿ ಕಾರ್ಯೋದ್ದೇಶಗಳ ಕುರಿತು ಮಾಧ್ಯಮಗಳ ಗಮನಸೆಳೆದಿದ್ದಾರೆ. “ಜಂಗೀಪುರ ಕ್ಷೇತ್ರವು 61.79 ಶೇಕಡಾ ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿದ್ದು ಇದುವರೆಗೂ ಈ ಕ್ಷೇತ್ರವು ಅಭಿವೃದ್ಧಿ ಕಂಡಿಲ್ಲ. ಮಾವು ಮತ್ತು ಸೆಣಬು ಕೃಷಿಯನ್ನೇ ನಂಬಿರುವ ಇಲ್ಲಿನ ಜನವರ್ಗಕ್ಕೆ ಉದ್ಯೋಗ ಸೃಷ್ಟಿಯ ಮುಖವು ಕಾಣದೇ ಇರುವುದರಿಂದ ವಲಸೆಯೊಂದೇ ಜೀವನೋಪಾಯವಾಗಿ ಕಂಡು ಬರುತ್ತಿರುವಂತಹ ಪರಿಸ್ಥಿತಿ ಎದುರಾಗಿದೆ. ಇದಲ್ಲದೇ ಹೆಚ್ಚಿನ ಜನಸಂಖ್ಯೆಯು ಕೊಲ್ಕತ್ತಾಕ್ಕೆ ವಲಸೆ ಹೋಗಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ವಿಶ್ವವಿದ್ಯಾನಿಲಯ ವಿಲ್ಲ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದಿರುವುದು ಈ ಕ್ಷೇತ್ರ ಎಷ್ಟೊಂದು ಹಿಂದುಳಿದಿದೆ ಎಂಬುದನ್ನು ಪ್ರತಿನಿಧಿಸುತ್ತಿದೆ‌.ಕಳೆದ ಮೂರು ದಶಕಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗದೇ ಇರುವುದು ವಿಷಾದನೀಯ” ಎಂದು ಇಲ್ಯಾಸ್ ರವರು ತಿಳಿಸಿದ್ದು ಸಾರ್ವತ್ರಿಕ ಚುನಾವಣೆಯು ಈ ಎಲ್ಲ ಕಾರ್ಯಗಳನ್ನು ಸಾಧಿಸಲು ಉತ್ತಮ ಅವಕಾಶವೆಂದು ಹೇಳಿಕೊಂಡಿದ್ದಾರೆ‌.

ಮೋದಿ ಸರಕಾರದ ನೀತಿಗಳನ್ನು ನೇರವಾಗಿ ಗುರಿಪಡಿಸುವ ಮೂಲಕ, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಹಕ್ಕುಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಉಲ್ಲಂಘಿಸಲಾಗಿದೆ ಎಂದು ಇಲ್ಯಾಸ್ ಹೇಳಿದರು. ಅದರ ವಿರುದ್ಧ ಧ್ವನಿ ಎತ್ತಿದ ಜನರಿಗೆ ಕಿರುಕುಳ ನೀಡಲಾಗುತ್ತಿರುವುದನ್ನು ವಿರೋಧಿಸಿದ ಅವರು ಜಾತ್ಯತೀತ ಸಮಾಜವನ್ನು ಹುಟ್ಟುಹಾಕಲು ಇಲ್ಲಿನ ಜನತೆ ಬೆಂಬಲಿಸುವರು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ 2012 ರಲ್ಲಿ ವೆಲ್ಫೇರ್ ಪಕ್ಷವು ಮೊದಲ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದು 42 ಸಾವಿರ ಮತಗಳನ್ನು ಪಡೆದಿತ್ತು. 2014 ರಲ್ಲಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಈಗ ಮೂರನೇ ಬಾರಿಗೆ ಪಕ್ಷವು ಲೋಕಸಭಾ ಅಭ್ಯರ್ಥಿಯಾಗಿ ಇಲ್ಯಾಸ್ ರವರನ್ನು ಕಣಕ್ಕಿಳಿಸಿದೆ.