ಹೊಸದಿಲ್ಲಿ,ಎ.13: ಐದು ತಿಂಗಳ ಹಿಂದೆ ಮನೆಬಿಟ್ಟು ಹೋದ ಮಗ ತೇಜ್‍ಪ್ರತಾಪ್‍ರನ್ನು ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‍ರ ಪತ್ನಿ ರಾಬ್ಡಿ ದೇವಿ ಮನೆಗೆ ಬರುವಂತೆ ಮನವಿ ಮಾಡಿದ್ದಾರೆ.”ಸಾಕು ಮಗನೇ, ಇನ್ನು ಮನೆಗೆ ಬಾ” ಎಂದು ರಾಬ್ಡಿ ದೇವಿ ಮಗನಿಗೆ ಹೇಳಿದರು. ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ವಿವಾದದ ನಂತರ ಆರ್‍ಜೆಡಿ ನಾಯಕ ಕೂಡ ಆಗಿರುವ ತೇಜ್‍ಪ್ರತಾಪ್ ಯಾದವ್ ಮನೆ ತೊರೆದು ಹೊರಟು ಹೋಗಿದ್ದರು. ಕೆಲವೊಮ್ಮೆ ತಂದೆ, ತಾಯಿಯನ್ನು ಮನೆಯ ಹೊರಗೆ ಭೇಟಿಯಾದರೂ ಪಾಟ್ನದ ತಮ್ಮ ಮನೆಗೆ ತೇಜ್‍ಪ್ರತಾಪ್ ಬರಲು ಸಿದ್ಧರಾಗಿಲ್ಲ. ದಿನಾಲೂ ಮಗನಿಗೆ ಕರೆ ಮಾಡುತ್ತಿದ್ದೇನೆ ಎಂದು ರಾಬ್ಡಿ ದೇವಿ ತಿಳಿಸಿದರು.
ತೇಜ್‍ಪ್ರತಾಪ್ ಮತ್ತು ಅವರ ಸಹೋದರ ತೇಜಸ್ವಿಯಾದವ್‍ರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವ ವರದಿಯ ಕುರಿತು ಕೇಳಿದಾಗ ಅದರಲ್ಲಿ ಸತ್ಯಾಂಶವಿಲ್ಲ. ಸ್ಥಾಪಿತ ಹಿತಾಸಕ್ತಿಗಳ ಸೃಷ್ಟಿಯದು ಎಂದು ರಾಬ್ಡಿ ದೇವಿ ಹೇಳಿದರು. ಕೆಲವರು ತನ್ನ ಮಗನನ್ನು ತಪ್ಪು ದಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಶತ್ರುಗಳು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಇದರ ಹಿಂದೆ ಬಿಜೆಪಿ, ಜೆಡಿಯು ಕಾರ್ಯಕರ್ತರಿದ್ದಾರೆ ಎಂದು ರಾಬ್ಡಿ ದೇವಿ ಆರೋಪಿಸಿದರು. ಲಾಲು ಪ್ರಸಾದ್ ಯಾದವ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾದ್ದರಿಂದ ತೇಜಸ್ವಿ ಪಾರ್ಟಿಯ ನಿಯಂತ್ರಣವನ್ನು ಎತ್ತಿಕೊಂಡಿದ್ದರು. ಲಾಲು ಪ್ರಸಾದ್ ಯಾದವ್‍ರ ಅನುಪಸ್ಥಿತಿ ತುಂಬ ನೋವು ತರುತ್ತಿದೆ. ಅವರು ಆದಷ್ಟು ಬೇಗ ಮನೆಗೆ ಮರಳುವಂತಾಗಲಿ ಎಂಬ ನಿರೀಕ್ಷೆ ತನ್ನಲ್ಲಿದೆ ಎಂದು ರಾಬ್ಡಿ ದೇವಿ ಹೇಳಿದರು.
ಆರ್‍ಜೆಡಿ ನಾಯಕ ಚಂದ್ರಿಕಾ ರಾಯ್‍ರ ಪುತ್ರನನ್ನು ತೇಜ್‍ಪ್ರತಾಪ್ ಯಾದವ್ ಮದುವೆಯಾಗಿದ್ದರು. ಆದರೆ ತಮ್ಮ ನಡುವೆ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿ ಮದುವೆಯಾದ ಒಂದೇ ತಿಂಗಳೊಳಗೆ ವಿವಾಹ ವಿಚ್ಛೇದನವನ್ನು ಘೋಷಿಸಿದ್ದರು. ಎರಡು ಕುಟುಂಬಗಳ ನಡುವೆ ಮಧ್ಯಸ್ಥಿಕೆಯ ಚರ್ಚೆ ನಡೆಸಿದರೂ ವಿವಾಹ ವಿಚ್ಛೇದನವೊಂದೇ ಪರಿಹಾರ ಎಂದು ತೇಜ್‍ಪ್ರತಾಪ್ ಹಟ ಹಿಡಿದಿದ್ದಾರೆ. ತನ್ನ ಹೆತ್ತವರು ಈ ವಿಷಯದಲ್ಲಿ ತನಗೆ ಸಹಕರಿಸಿಲ್ಲ ಎಂದು ಆರೋಪಿಸಿ ತೇಜ್‍ಪ್ರತಾಪ್ ಮನೆಬಿಟ್ಟು ಹೋಗಿದ್ದಾರೆ.












