ಹೊಸದಿಲ್ಲಿ,ಮೇ 1: ಶ್ರೀಲಂಕಾದಲ್ಲಿ ಈಸ್ಟರ್ ಆಚರಣೆಯ ವೇಳೆ ಭಯೋತ್ಪಾದನಾ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಮುಖವಸ್ತ್ರ ನಿಷೇಧ ವಿಧಿಸಲಾಗಿದ್ದು ಭಾರತದಲ್ಲಿಯೂ ಇದನ್ನು ಜಾರಿಗೆ ತರಬೇಕೆಂದು ಶಿವಸೇನೆ ಆಗ್ರಹಿಸಿದೆ. ಒಂದು ಪ್ರತ್ಯೇಕ ಸಮುದಾಯದ ಮಹಿಳೆಯರು ಬುರ್ಕಾ ಧರಿಸುವುದನ್ನು ತಡೆಯಬೇಕೆಂದು ಶಿವಸೇನೆ ಆಗ್ರಹಿಸಿತು. ವ್ಯಕ್ತಿಗಳನ್ನು ಗುರುತಿಸಲು ಇದರಿಂದ ಅಡಚಣೆಯಾಗುತ್ತಿದೆ. ಮುಖವಸ್ತ್ರ ಧರಿಸಿದ ಜನರು ರಾಷ್ಟ್ರದ ಸುರಕ್ಷೆಗೆ ಬೆದರಿಕೆಯಾಗಿದ್ದಾರೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಆಗ್ರಹಿಸಲಾಗಿದೆ.
ಕೊಲೊಂಬೊದಲ್ಲಿ ನಡೆದ ಸರಣಿಸ್ಫೋಟದ ಹಿನ್ನೆಲೆಯಲ್ಲಿ ಶ್ರೀಲಂಕದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆಯ ಕಚೇರಿ ಸಾರ್ವಜನಿಕ ಸ್ಥಳಗಳಲ್ಲಿ ಮುಖಪರದೆ ಧರಿಸುವುದಕ್ಕೆ ನಿಷೇಧ ಹೇರಿದೆ. ಇನ್ನು ಶ್ರೀಲಂಕಾದಲ್ಲಿ ಯಾವುದೇ ರೀತಿಯ ಮುಖವಸ್ತ್ರ ಧರಿಸಲು ಅನುಮತಿಸಲಾಗದು ಎಂದು ಸರಕಾರದ ಆದೇಶ ಪ್ರಕಟಗೊಂಡಿದೆ.












