ಹೈದರಾಬಾದ್,ಎ.3: ಹತ್ತನೆ ತರಗತಿ ವಿದ್ಯಾರ್ಥಿಯೊಬ್ಬ ಪಬ್ಜಿ ಆಡಬೇಡ ಎಂದು ತಾಯಿ ಗದರಿಸಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹದಿನಾರರ ಹರೆಯದ ವಿದ್ಯಾರ್ಥಿ ಆನ್ಲೈನ್ನಲ್ಲಿ ಗೇಮ್ ಪ್ಲೇಯರ್ಸ್ ಅನ್ನೌನ್ ಬೆಟಲ್ಗ್ರೌಂಡ್ಸ್(ಪಬ್ಜಿ) ಹೆತ್ತವರ ಫೋನ್ನಲ್ಲಿ ಆಡುತ್ತಿದ್ದ ಎಂದು ತಿಳಿಸಿದ್ದಾರೆ.
ಹತ್ತನೆ ತರಗತಿ ಪರೀಕ್ಷೆ ನಡೆಯುತ್ತಿತ್ತು. ಆದ್ದರಿಂದ ಬಾಲಕನ ತಾಯಿ ಪಬ್ಜಿ ಆಡದಂತೆ ಗದರಿಸಿದ್ದರು. ನಂತರ ಬಾಲಕ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿದ. ನಂತರ ಕೋಣೆಯೊಳಗಿದ್ದ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾನೆ ಎಂದು ಮಲ್ಕಾನಾಗಿರಿಯ ಠಾಣೆ ನಿರೀಕ್ಷಕ ಸಂಜೀವ್ ರೆಡ್ಡಿ ತಿಳಿಸಿದರು. ಬಹಳ ಹೊತ್ತು ಬಾಲಕ ಬಾಗಿಲು ತೆಗೆಯದ್ದರಿಂದ ಬಾಗಿಲು ಒಡೆದು ಕೋಣೆಯೊಳಗೆ ಹೋಗಬೇಕಾಯಿತು. ಅಷ್ಟರಲ್ಲಿ ಬಾಲಕ ನೇಣು ಹಾಕಿಕೊಂಡಿರುವುದು ಕಾಣಿಸಿತು. ಕೂಡಲೇ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಬಾಲಕ ಮೃತನಾಗಿದ್ದಾನೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದರು.












