ಕೋಲ್ಕತಾ,ಎ.4: ಪ್ರಧಾನಿ ನರೇಂದ್ರ ಮೋದಿ ತನ್ನೊಡನೆ ಟಿವಿ ಅಥವಾ ಸಾರ್ವಜನಿಕ ಸಮ್ಮೇಳನದಲ್ಲಿ ನೇರ ಚರ್ಚಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಮಮತಾ ಅಡ್ಡಿಪಡಿಸುತ್ತಿದ್ದಾರೆ ಎಂದು ಕಳೆದ ದಿವಸ ಪಶ್ಚಿಮ ಬಂಗಾಳದಲ್ಲಿ ಮೋದಿ ಹೇಳಿಕೆ ನೀಡಿದ್ದಕ್ಕೆ ಮಮತಾ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಸುಳ್ಳು ಹೇಳಲು ತಾನು ಮೋದಿಯಲ್ಲ ಎಂದು ಕೂಚ್ ಬಿಹಾರದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ರ್ಯಾಲಿಯಲ್ಲಿ ಮಮತಾ ಹೇಳಿದರು.ಸಿಲಿಗುರಿ ಮತ್ತು ಕೊಲ್ಕತಾದಲ್ಲಿ ಬಡತನವನ್ನು ಹಾಗೆಯೇ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯಲು ಮಮತಾ ಶ್ರಮಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದರು.
ಮೋದಿಯ ಆಡಳಿತದಲ್ಲಿ 12,000 ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಮತಾ ನೆನಪಿಸಿದರು. ತನ್ನ ಆಡಳಿತದಲ್ಲಿ ರೈತರ ವೇತನ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಆದರೆ ತೃಣಮೂಲ್ ಮತ್ತು ಕಾಂಗ್ರೆಸ್ ಪಾಕಿಸ್ತಾನದ ಬೆಂಬಲಿಗರು, ದೇಶದ ಸೇನೆಯ ಮನೋಸ್ಥೈರ್ಯ ನಾಶಪಡಿಸುವುದು ಅವರ ಉದ್ದೇಶವಾಗಿದೆ ಎಂದು ಮೋದಿ ಪಶ್ಚಿಮಬಂಗಾಳದ ತಮ್ಮ ಚುನಾವಣೆ ಪ್ರಚಾರದಲ್ಲಿ ಆರೋಪಿಸಿದ್ದರು.












