ನವದೆಹಲಿ, ಎ,8: “ದೇಶದ ಯುವಜನತೆ ದೇಶದ ಆಸ್ತಿಯಾಗಬೇಕಿದೆಯೇ ಹೊರತು ದೇಶಕ್ಕೆ ಹೊರೆಯಾಗಬಾರದು” ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ನೂತನ ರಾಷ್ಟ್ರಾಧ್ಯಕ್ಷರಾದ ಸೈಯದ್ ಸಾದತುಲ್ಲಾಹ್ ಹುಸೈನಿ ಮುಸ್ಲಿಮ್ ಯುವಜನಾಂಗಕ್ಕೆ ಕರೆ ನೀಡಿದರು. ಅವರು ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಮೊದಲ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ನಮ್ಮ ಸಮುದಾಯವು ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಇತರ ಎಲ್ಲ ಧಾರ್ಮಿಕ ಸಮುದಾಯಗಳೊಂದಿಗೆ ತಮ್ಮ ಸಂಬಂಧಗಳನ್ನು ಬಲಪಡಿಸಬೇಕು. ಕೋಮುವಾದಿ ರಾಜಕೀಯದ ಕಾರಣದಿಂದ ಸಮಾಜದಲ್ಲಿ ಕೋಮು ವಿಭಜನೆ ಹೆಚ್ಚುತ್ತಿದೆ. ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿಕೊಂಡು ಯುವಜನರು ಜಾಗೃತರಾಗಬೇಕಿದೆ. ಶೈಕ್ಷಣಿಕ ರಂಗದಲ್ಲಿ ಮುಂದುವರೆದು ತಮ್ಮನ್ನು ತಾವು ಉದ್ಯೋಗಸ್ತರನ್ನಾಗಿ ಮಾಡಿಕೊಳ್ಳಬೇಕಿದೆ. ತನ್ಮೂಲಕ ದೇಶದ ಆಸ್ತಿಯಾಗಿ ಮಾರ್ಪಡಲು ಪ್ರಯತ್ನಿಸಬೇಕಾದ ಅಗತ್ಯತೆ ಇದೆ. ಮುಸ್ಲಿಮರೆಂಬ ನೆಲೆಯಲ್ಲಿ ಇಸ್ಲಾಮಿನ ಶಾಂತಿ ಸಂದೇಶವನ್ನು ನಮ್ಮ ಮಾತು,ಕೃತಿ ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜದಲ್ಲಿ ಸಾರಬೇಕಾದ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಮರೆಯಬಾರದು. ಇಸ್ಲಾಮ್ ಶಾಂತಿಯ ಮತ್ತು ಸತ್ಕರ್ಮಗಳ ಧರ್ಮವೆಂಬುದನ್ನು ಸಾರಬೇಕು” ಎಂದು ಅವರು ನುಡಿದರು.
ಲೋಕಸಭಾ ಚುನಾವಣೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹುಸೈನಿಯವರು,” ದೇಶದ ಪ್ರಗತಿಗೆ ಪೂರಕವಾದ ಅಭ್ಯರ್ಥಿಗಳಿಗೆ ಮತ ನೀಡುವಂತೆಯೂ, ದೇಶವನ್ನು ಕೋಮುಧ್ರುವೀಕರಣಕ್ಕೆ ತಳ್ಳುವವರಿಂದ ದೂರವಿರಿಸುವಂತೆ ಕರೆ ನೀಡಿದರು. “ರಾಜಕೀಯ ಪಕ್ಷಗಳು ಸಮಾಜವನ್ನು ಕೋಮುಧ್ರುವೀಕರಣಕ್ಕೊಳಪಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ” ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ಪ್ರಜಾಸತ್ತಾತ್ಮಕ ವಿಚಾರಧಾರೆಯುಳ್ಳ, ಸಮಾಜವನ್ನು ಪ್ರಗತಿಯತ್ತ ಮುನ್ನಡೆಸಲು ಸಾಧ್ಯವುಳ್ಳ ಅಭ್ಯರ್ಥಿಗಳಿಗೆ ತನ್ನ ಬೆಂಬಲವನ್ನು ಸೂಚಿಸುತ್ತದೆ. ಕೋಮುರಾಜಕೀಯದ ವಿರುದ್ಧ ಜಮಾಅತೆ ಇಸ್ಲಾಮೀ ಕಾರ್ಯನಿರ್ವಹಿಸಲು ಮತದಾರರಿಗೆ ಕರೆ ನೀಡುತ್ತದೆ ಎಂದು ಅವರು ನುಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ರಾಷ್ಟ್ರಾಧ್ಯಕ್ಷರಾದ ಸೈಯದ್ ಮೌಲಾನ ಜಲಾಲುದ್ದೀನ್ ಉಮರಿ, ನೂತನ ಉಪಾಧ್ಯಕ್ಷರುಗಳಾದ ಡಾ.ಸಲೀಮ್ ಇಂಜನೀಯರ್ ಹಾಗೂ ಎಸ್. ಅಮೀನುಲ್ ಹಸನ್, ಡಾ. ಸಲೀಮ್ ಇಂಜನೀಯರ್, ಮುಹಮ್ಮದ್ ಜಾಫರ್ ಹಾಗೂ ನೂತನ ಪ್ರಧಾನ ಕಾರ್ಯದರ್ಶಿಯಾದ ಟಿ. ಆರೀಫ್ ಅಲಿಯವರು ಉಪಸ್ಥಿತರಿದ್ದರು.












