ಇಫ್ತಾರ್‌ಗೆ ಪಿರಂಗಿ ಸಿಡಿಸಲು ಸಜ್ಜಾದ ಶಾರ್ಜ ಪೊಲೀಸರು

0
648

ಶಾರ್ಜ,ಮೇ 1: ರಮಝಾನ್‍ನಲ್ಲಿ ಉಪವಾಸ ತೊರೆಯುವ ಸಮಯ ತಿಳಿಸುವ ಪಿರಂಗಿ ಈಬಾರಿಯೂ ಶಾರ್ಜದ ಪ್ರಧಾನ ಕೇಂದ್ರ ಮತ್ತು ಉಪನಗರಗಳಲ್ಲಿ ಸಿಡಿಯಲಿದೆ. ಶಾರ್ಜ ಪೊಲೀಸ್‍ನ ಟಾಸ್ಕ್ ಮ್ಯಾನೇಜ್‍ಮೆಂಟ್‍ನ ಸೆಕ್ಯೂರಿಟಿ ಆಂಡ್ ಗಾರ್ಡ್ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಖಾಲಿದ್ ಅಲ್ ಅಸಾದ್ ಪರಂಪರಾಗತವಾಗಿ ನಡೆದು ಬಂದ ಫಿರಂಗ ಸ್ಫೋಟಿಸಿ ಸಮಯ ತಿಳಿಸುವ ಸಂಪ್ರದಾಯವನ್ನು ಈಬಾರಿಯೂ ಮುಂದುವರಿಸಲಾಗುವುದು ಎಂದು ತಿಳಿಸಿದರು. ಪ್ರದೇಶದ ನಿವಾಸಿಗಳಿಗೆ ಸ್ಪಷ್ಟವಾಗಿ ಕಾಣಿಸುವಂತೆ ಪಿರಂಗಿಯನ್ನು ಇರಿಸಲಾಗುವುದು ಎಂದು ಅವರು ತಿಳಿಸಿದರು.

ಪಿರಂಗಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗಿದ್ದು ಶಾರ್ಜದ ಉಪನಗರಗಳಲ್ಲಿ ಹೆಚ್ಚು ಪ್ರಮುಖವಾದ ಹನ್ನೊಂದು ಸ್ಥಳಗಳಲ್ಲಿ ಈ ಸಲ ಪಿರಂಗಿಯನ್ನು ಇರಿಸಲಾಗಿದೆ. ಪಿರಂಗಿ ಸ್ಫೋಟವನ್ನು ನೋಡಲು ಬರುವವರಿಗೆ ಉಪವಾಸ ತೊರೆಯಲು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. 1803 ರಿಂದ 1886ರವರೆಗೆ ಶಾರ್ಜವನ್ನು ಆಳಿದ್ದ ಶೇಖ್ ಸುಲ್ತಾನ್ ಬಿನ್ ಸಾಖರ್ ಅಲ್ ಖಾಸ್ಮಿಯವರ ಆಡಳಿತದ ಕಾಲದಲ್ಲಿ ಇಫ್ತಾರ್‌ಗೆ ಪಿರಂಗಿ ಮೊಳಗಿಸುವ ಕಾರ್ಯ ಆರಂಭವಾಗಿತ್ತು.

ಅದಾನ್ ಕರೆಗೆ ಆಧುನಿಕ ಉಪಕರಣಗಳು ಅಂದು ಅಸ್ತಿತ್ವದಲ್ಲಿರಲಿಲ್ಲ. ಆದ್ದರಿಂದ ಪಿರಂಗಿ ಸದ್ದು ಉಪವಾಸ ತೊರೆಯಲು ಅಂದು ಹೆಚ್ಚು ಸಹಕಾರಿಯಾಗಿತ್ತು. ಮರುಭೂಮಿ ಮತ್ತು ಸಮುದ್ರ ವ್ಯಾಪಾರಕ್ಕೆ ಹೋದ ವರ್ತಕ ತಂಡಗಳಿಗೆ ಉಪವಾಸ ತೊರೆಯಲು ಪಿರಂಗಿ ಸದ್ದು ಹೆಚ್ಚು ಪ್ರಯೋಜನಕರವಾಗಿತ್ತು. ಇಂದು ಮನುಷ್ಯ ದೇಹದ ಭಾಗವಾದ ಸ್ಮಾರ್ಟ್ ಫೋನ್ ಸಹಾಯದಲ್ಲಿ ಸರಿಯಾದ ಸಮಯಕ್ಕೆ ಉಪವಾಸ ತೊರೆಯಲು ಅದಾನ್ ಕರೆ ಮತ್ತು ನಮಾಝ್‍ನ ಸಮಯ, ಇಖಾಮತ್ ಕೇಳುವ ಸೌಲಭ್ಯಗಲಿವೆ. ಆದರೂ ಹಳೆ ಸಂಪ್ರದಾಯವನ್ನು ಮುಂದುವರಿಸಲು ಶಾರ್ಜ ಪೊಲೀಸರು ಸಿದ್ಧರಾಗಿದ್ದಾರೆ.