ಹೊಸದಿಲ್ಲಿ,ಮೇ 2: ಆದಿವಾಸಿಗಳಿಗೆ ಗುಂಡಿಟ್ಟು ಕೊಲ್ಲಲು ಅವಕಾಶ ಇರುವ ಕಾನೂನನ್ನು ನರೇಂದ್ರ ಮೋದಿ ತಂದಿದ್ದಾರೆ ಎಂದು ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗ ನೋಟಿಸು ಜಾರಿಮಾಡಿದೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ವಿವಾದ ಹೇಳಿಕೆ ನೀಡಿದ್ದರು.
ಆದಿವಾಸಿಗಳನ್ನು ಗುಂಡಿಟ್ಟುಕೊಲ್ಲಲು ಪೊಲೀಸರಿಗೆ ಅವಕಾಶ ಕೊಡುವ ಹೊಸ ಕಾನೂನನ್ನು ಮೋದಿ ಸರಕಾರ ರೂಪಿಸಿದೆ. ಆದಿವಾಸಿಗಳ ಮೇಲೆ ದಾಳಿ ಮಾಡಿ ಅವರ ಜಮೀನನ್ನು ವಶಪಡಿಸಿಕೊಳ್ಳಬಹುದು. ಅವರ ಅರಣ್ಯಪ್ರದೇಶವನ್ನು ವಶಪಡೆಯಬಹುದು. ಕೊನೆಗೆ ಅವರನ್ನು ಗುಂಡಿಟ್ಟು ಸಾಯಿಸಬಹುದು ಎಂದು ಕಾನೂನಿನಲ್ಲಿದೆ ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದರು. ಎಪ್ರಿಲ್ 23ರಂದು ಶಹ್ದೊಲಿನಲ್ಲಿ ರಾಹುಲ್ ಹೇಳಿಕೆ ನೀಡಿದ್ದು ಇದಕ್ಕೆ ಕೂಡಲೇ ಉತ್ತರ ನೀಡಬೇಕೆಂದು ನೋಟಿಸಿನಲ್ಲಿ ಚುನಾವಣಾ ಆಯೋಗ ಹೇಳಿದೆ. ನೋಟಿಸಿನ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.












