ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಭಾರತ ಪ್ರಸ್ತಾವ: ತಿರಸ್ಕರಿಸಿದ ಚೀನಾ!

0
1196

ಪುಲ್ವಾಮ ಭಯೋತ್ಪಾದನಾ ದಾಳಿಯನ್ನು ಖಂಡಿಸಿದರೂ ಕೂಡ, ಮಸೂದ್ ಅಝರ್ ನನ್ನು ಮಾತ್ರ ಭಯೋತ್ಪಾದಕನೆಂದು ಒಪ್ಪಲು ಸಜ್ಜಾಗದ ಚೀನಾ!

ಬೀಜಿಂಗ್: 44 ಮಂದಿ ಸಿಆರ್ ಪಿಎಫ್ ಯೋಧರು ಹತ್ಯೆಯಾದ ಪುಲ್ವಾಮ ಭಯೋತ್ಪಾದನಾ ದಾಳಿಯ ಬಳಿಕವೂ ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕೆಂದು ಭಾರತ ಮಂಡಿಸಿದ ಆಗ್ರಹವನ್ನು ಚೀನಾ ತಿರಸ್ಕರಿಸಿದೆ.

ಪುಲ್ವಾಮ ದಾಳಿಯ ಹೊಣೆಯನ್ನು ಜೈಷೆ ಮುಹಮ್ಮದ್ ವಹಿಸಿಕೊಂಡಿತ್ತು. ಜಾಗತಿಕ ರಾಷ್ಟ್ರಗಳು ಭಯೋತ್ಪಾದನಾ ದಾಳಿಯನ್ನು ಖಂಡಿಸಿದ್ದರಿಂದ ಚೀನ ತನ್ನ ನಿಲುವನ್ನು ಬದಲಾಯಿಸಬಹುದು, ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬಹುದು ಎಂದು ಅಂದಾಜಿಸಲಾಗಿತ್ತು.

ಆದರೆ, ಚೀನಾ ಭಯೋತ್ಪಾದನಾ ದಾಳಿಯನ್ನು ಖಂಡಿಸಿದರೂ ಕೂಡ ಮಸೂದ್ ಅಝರ್‍ನನ್ನು ಮಾತ್ರ ಭಯೋತ್ಪಾದಕನೆಂದು ಒಪ್ಪಲು ಸಜ್ಜಾಗಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚೀನಾ ವೀಟೊ ಅಧಿಕಾರ ಹೊಂದಿದೆ. ಮಸೂದ್ ಅಝರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಬೇಕೆನ್ನುವ ವಿಶ್ವಸಂಸ್ಥೆ ಮತ್ತು ಭಾರತದ ಪ್ರಸ್ತಾವಕ್ಕೆ ಅದು ನಿರಂತರ ವೀಟೊ ಪ್ರಯೋಗಿಸಿ ತಡೆಯುತ್ತಾ ಬಂದಿದೆ.

ಚೀನಾದ ವಿದೇಶ ಸಚಿವಾಲಯದ ವಕ್ತಾರ ಪುಲ್ವಾಮ ಭಯೋತ್ಪಾದಕ ದಾಳಿ ನಡುಕ ಸೃಷ್ಟಿಸುವ ಕೃತ್ಯವೆಂದು ಮಾಧ್ಯಮಗಳಿಗೆ ಹೇಳಿದ್ದರು. ಎಲ್ಲ ರೀತಿಯ ಭಯೋತ್ಪಾದನೆಯನ್ನು ಚೀನಾ ವಿರೋಧಿಸುತ್ತಿದೆ. ವಿವಿಧ ದೇಶಗಳೊಂದಿಗೆ ಸೇರಿ ಭಯೋತ್ಪಾದ ನಿರ್ಮೂಲನಕ್ಕೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಆದರೆ ಮಸೂದ್ ಅಝರ್‍ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ವಿಚಾರದಲ್ಲಿ ಅವರು ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ. ಜೈಷೆ ಮುಹಮ್ಮದ್ ಮುಖ್ಯಸ್ಥನನ್ನು ಜಾಗತಿಕ ಭಯೋತ್ಪಾದಕನಾಗಿ ಘೋಷಿಸುವ ಭಾರತದ ಕ್ರಮಕ್ಕೆ ಭದ್ರತಾ ಸಮಿತಿಯಲ್ಲಿ ಒಮ್ಮತವಿಲ್ಲ ಎಂಬ ನೆಪ ಹೇಳಿ ಚೀನಾ ವೀಟೊ ಪ್ರಯೋಗಿಸುತ್ತಾ ಬಂದಿದೆ.