ಜೈಷ್ ಅಂಡರ್‌ವಾಟರ್ ದಾಳಿ ತರಬೇತಿ; ನಾವು ಸಮುದ್ರೊಳಗೆಯೇ ಅವರನ್ನು ದಫನ ಮಾಡಲು ಸಿದ್ಧರಾಗಿದ್ದೇವೆ- ನೌಕಾಸೇನೆ ಮುಖ್ಯಸ್ಥ

0
619

ಸನ್ಮಾರ್ಗ ವಾರ್ತೆ

ಪುಣೆ,ಆ.27: ನೌಕಾಸೇನೆಯ ಮುಖ್ಯಸ್ಥ ಎಡ್ಮಿರಲ್ ಕರಮ್‍ಬೀರ್ ಸಿಂಗ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಷೆ ಮುಹಮ್ಮದ್‍ ಸಮುದ್ರದೊಳಗಿನಿಂದ ದಾಳಿ ಮಾಡಲು ತರಬೇತಿ ಪಡೆಯುತ್ತಿದೆ. ಭಾರತೀಯ ನೌಕಾಪಡೆ ಇಂತಹ ಪ್ರಯತ್ನಗಳನ್ನು ಸಂಪೂರ್ಣ ವಿಫಲಗೊಳಿಸಲು ಶಕ್ತವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು.

ತಟ ರಕ್ಷಣೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಸಮುದ್ರದ ದಾರಿಯಲ್ಲಿ ಯಾರೂ ದೇಶದೊಳಗೆ ನುಸುಳದಂತೆ ನೋಡಿಕೊಳ್ಳಲಾಗುತ್ತಿದೆ. ಜೈಷ್‍ನ ಅಂಡರ್‍ವಾಟರ್ ವಿಂಗ್ ಜಲಮಾರ್ಗದ ಮೂಲಕ ದಾಳಿ ನಡೆಸುವ ತರಬೇತಿ ಪಡೆಯುತ್ತಿದೆ ಎಂದು ಇಂಟಲಿಜೆನ್ಸ್ ವರದಿಯಿದೆ. ಅದಕ್ಕೆ ತಕ್ಕ ಪಾಠ ಕಲಿಸಲು ನಾವು ಸಮರ್ಥರಿದ್ದೇವೆ. ಇಂತಹ ಯಾವುದೇ ದಾಳಿ ಯತ್ನವನ್ನು ಸಮುದ್ರದಲ್ಲಿಯೇ ದಫನ ಮಾಡಲಾಗುವುದು ಎಂದು ಅವರು ಹೇಳಿದರು.

ಭಾರತೀಯ ನೌಕಾಪಡೆ, ಸಮುದ್ರ ಪೊಲೀಸರು, ರಾಜ್ಯ ಸರಕಾರ ಮತ್ತು ಇತರ ವಿಭಾಗಗಳು ಸಮುದ್ರ ದಾರಿಯಾಗಿ ಭಯೋತ್ಪಾದಕರು ನುಸುಳದಂತೆ ಕಟ್ಟೆಚ್ಚರವಹಿಸಿದೆ ಎಂದು ಕರಮ್‍ಬೀರ್ ಸಿಂಗ್ ತಿಳಿಸಿದರು. ದೇಶದ ಮೇಲಿರುವ ಸಮಸ್ತ ಸಮುದ್ರ ಸವಾಲುಗಳನ್ನು ವಿವರಿಸಿದರು. ನೌಕಾಪಡೆ ತನ್ನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಬಜೆಟ್‍ನ ಬೆಂಬಲವೂ ಅಗತ್ಯವಿದೆ ಎಂದರು. 2012 ಮತ್ತು 13ರಲ್ಲಿ ರಕ್ಷಣಾ ಬಜೆಟ್‍ನಲ್ಲಿ ನೌಕಾಸೇನೆಯ ಪಾಲು ಶೇ.18 ಇತ್ತು ಈಗ ಶೇ.13ಕ್ಕೆ ಕಡಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

2024ರಲ್ಲಿ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯ ಉದ್ದೇಶವನ್ನು ದೇಶ ಇಟ್ಟುಕೊಂಡಿದೆ. ದೇಶದ ಬೇಡಿಕೆ ಈಡೇರಿಸಲು ಸ್ವಲ್ಪ ಕಷ್ಟವಾಗುತ್ತಿದೆ ಮತ್ತು ಸಮುದ್ರ ಮಾರ್ಗದಲ್ಲಿ ರಕ್ಷಣೆ ವಿಚಾರಕ್ಕೆ ಉತ್ತೇಜನ ಸಿಗಬೇಕಾಗಿದೆ. ಹಿಂದೂ ಮಹಾಸಾಗರ-ಬದಲಾದ ಆಯಾಮ ಭಾರತದ ಸಮುದ್ರ ಸುರಕ್ಷೆಯ ವಿಷಯದಲ್ಲಿ ಎಡ್ಮಿರಲ್ ಸಿಂಗ್ ಅಭಿಪ್ರಾಯ ತಿಳಿಸಿದರು.