ಇಲ್ಲದಾಗುತ್ತಿರುವ ದಕ್ಷಿಣಕನ್ನಡದ ಬ್ಯಾಂಕುಗಳು!

0
821

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ. 31: ಕೇಂದ್ರ ಸರಕಾರ ಸಾರ್ವಜನಿಕ ಬ್ಯಾಂಕುಗಳ ವಿಲೀನ ಘೋಷಿಸಿದ ಬೆನ್ನಿನಲ್ಲಿಯೇ ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿ ಹಬ್ಬಿಕೊಂಡಿದ್ದ ನಾಲ್ಕು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಇದೀಗ ಇಲ್ಲದಾಗುತ್ತಿವೆ. ಇವುಗಳಲ್ಲಿ ಮೂರು ಈ ವರ್ಷ, ಒಂದು ಕಳೆದ ವರ್ಷ ವಿಲೀನ ನೀತಿಯ ಭಾಗವಾಗುತ್ತಿವೆ. ತಮ್ಮ ಜೀವನದ ಜೊತೆ ಜೊತೆಗೆ ಬೆಳೆದು ಬಂದ ಈ ಬ್ಯಾಂಕಗಳನ್ನು ಇನ್ನು ಕಾಣಲು ಸಾಧ್ಯವಿಲ್ಲದ ಪರಿಸ್ಥಿತಿ ದಕ್ಷಿಣ ಕನ್ನಡಿಗರದ್ದು. ಕೆನರಾ, ಕಾರ್ಪೊರೇಷನ್, ವಿಜಯ, ಸಿಂಡಿಕೇಟ್ ಬ್ಯಾಂಕ್ ದಕ್ಷಿಣ ಕನ್ನಡದಲ್ಲಿ ಉಗಮಗೊಂಡ ಬ್ಯಾಂಕುಗಳು.

ಕಾರ್ಪೊರೇಷನ್ ಮೊತ್ತ ಮೊದಬಾರಿ 1906ರಲ್ಲಿ ಮಾರ್ಚ್ 12 ರಂದು ಪ್ರಾರಂಭವಾಯಿತು. 1980ರಲ್ಲಿ ಇಂದಿರಾ ಗಾಂಧಿಯ ರಾಷ್ಟ್ರೀಕರಣದಲ್ಲಿ ಇದು ಸಾರ್ವಜನಿಕ ಬ್ಯಾಂಕ್ ಆಗಿ ಮಾರ್ಪಟ್ಟಿತ್ತು. ಕೆನರಾ ಬ್ಯಾಂಕಿನ ರೂವಾರಿ ಅಮ್ಮೆಂಬಳ ಸುಬ್ಬರಾವ್ ಆಗಿದ್ದಾರೆ. 1910ರಲ್ಲಿ ಬ್ಯಾಂಕಿಗೆ ಕೆನರಾ ಎಂದು ಹೆಸರಿಡಲಾಯಿತು. 1969ರಲ್ಲಿ ಹದಿಮೂರು ಬ್ಯಾಂಕ್‍ಗಳೊಂದಿಗೆ ಕೆನರಾ ಬ್ಯಾಂಕ್ ರಾಷ್ಟ್ರೀಕರಣಗೊಂಡಿತು. ವಿಜಯ ಬ್ಯಾಂಕನ್ನು ರೈತ ಎಬಿ ಶೆಟ್ಟಿ ಸ್ಥಾಪಿಸಿದ್ದರು. ಇದನ್ನು ಕೂಡ ಇಂದಿರಾಗಾಂಧಿ ರಾಷ್ಟ್ರೀಕರಣಗೊಳಿಸಿದರು. ಕಳೆದ ವರ್ಷ ದೇನಾಬ್ಯಾಂಕ್, ಬ್ಯಾಂಕ್ ಆಫ್ ಬರೋಡದೊಂದಿಗೆ ವಿಜಯ ಬ್ಯಾಂಕ್ ವಿಲೀನವಾಗಿದೆ. ಟಿಎಂಎ ಪೈ, ಉಪೇಂದ್ರ ಪೈ, ವಾಮನ ಕುಡ್ವರ ನೇತೃತ್ವದಲ್ಲಿ 1925ರಲ್ಲಿ ಸಿಂಡಿಕೇಟ್ ಬ್ಯಾಂಕ್ ಅಸ್ತಿತ್ವಕ್ಕೆ ಬಂತು. 1969ರಲ್ಲಿ ಇದು ಕೂಡಾ ರಾಷ್ಟ್ರೀಕರಣಗೊಂಡಿತ್ತು.