ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.5: ಐಎನ್ಎಕ್ಸ್ ಮೀಡಿಯಾ ಎನ್ಫೋರ್ಸ್ಮೆಂಟ್ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂಗೆ ನಿರೀಕ್ಷಣಾ ಜಾಮೀನು ಸುಪ್ರೀಂಕೋರ್ಟು ನೀಡಿಲ್ಲ. ಚಿದಂಬರಂಗೆ ಈಗ ಜಾಮೀನು ನೀಡಿದರೆ ಕೇಸಿನ ಪ್ರಗತಿಗೆ ಪ್ರತಿಕೂಲವಾಗಬಹುದು ಎಂದು ಕೋರ್ಟು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಚಿದಂಬರಂರ ದಾಖಲೆಗಳನ್ನು ಪರಿಶೀಲಿಸದೆ ಕೋರ್ಟು ಅವರ ಅರ್ಜಿಯನ್ನು ವಜಾಗೊಳಿಸಿತು.
ತನ್ನ ವಿರುದ್ಧ ಬಂಧನ ಸಹಿತ ಕ್ರಮಗಳಿಗೆ ಇಡಿಯ ಬಳಿ ದಾಖಲೆಗಳಿಲ್ಲ ಎಂದು ಚಿದಂಬರಂ ವಾದಿಸಿದರು. ಲೆಕ್ಕ ರಹಿತ ಬ್ಯಾಂಕ್ ಠೇವಣಿ, ಆಸ್ತಿ ತನಗಿಲ್ಲ. ಸರಿಯಾಗಿ ತೆರಿಗೆ ಪಾವತಿಸಲಾಗುತ್ತಿದೆ ಎಂದು ಚಿದಂಬರಂ ವಾದಿಸಿದ್ದಾರೆ. ಎಲ್ಲ ಪುರಾವೆಗಳನ್ನು ಆರೋಪಿಗೆ ತಿಳಿಸಿ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಇಡಿ ವಾದಿಸಿತು. ಎಪ್ಪತ್ತನಾಲ್ಕು ವರ್ಷದ ಚಿದಂಬರಂ ಈಗ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಕಪ್ಪುಹಣ ಬಿಳಿ ಮಾಡುವುದು ಸಮಾಜ ಮತ್ತು ರಾಷ್ಟ್ರ ವಿರೋಧಿ ಕೃತ್ಯವಾಗಿರುವುದರಿಂದ ಚಿದಂಬರಂರನ್ನು ಕಸ್ಟಡಿಗೆ ಕೊಡಿ; ಅವರನ್ನು ಪ್ರಶ್ನಿಸಬೇಕಾಗಿದೆ ಎಂದು ಇಡಿ ಸುಪ್ರೀಂಕೋರ್ಟಿನಲ್ಲಿ ಆಗ್ರಹಿಸಿತ್ತು. ದಿಲ್ಲಿ ಹೈಕೋರ್ಟು ನಿರೀಕ್ಷಣಾ ಜಾಮೀನು ತಿರಸ್ಕರಿಸಿದ್ದರಿಂದ ಆಗಸ್ಟ್ 21ಕ್ಕೆ ಅವರನ್ನು ಸಿಬಿಐ ಬಂಧಿಸಿತ್ತು.












