ಒಂದೇ ವೇದಿಕೆಯಲ್ಲಿ ಮತ್ತೆ ಕಾಣಿಸಿಕೊಂಡ ಗುಜರಾತ್ ಗಲಭೆಯ ಭಿನ್ನ ಮುಖಗಳು!

0
1206

ಅಶೋಕ್ ಮೋಚಿಯ ಅಂಗಡಿ ಉದ್ಘಾಟಿಸಿದ ಕುತುಬುದ್ದೀನ್ ಅನ್ಸಾರಿ

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಸೆ.9: 2002ರ ಗುಜರಾತ್ ದಂಗೆಯ ಬೇಟೆಗಾರ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಿಸಲಾಗಿದ್ದ ಅಶೋಕ್ ಮೋಚಿ, ಸಂಘಪರಿವಾರ ದಂಗೆಕೋರರ ಮುಂದೆ ಕೈಜೋಡಿಸಿ ಬೆದರುಕಣ್ಣುಗಳಿಂದ ಜೀವ ಭಿಕ್ಷೆ ಬೇಡುತ್ತಿದ್ದ ಕುತುಬುದ್ದೀನ್ ಅನ್ಸಾರಿಯು ಗಲಭೆಯ ಭಿನ್ನ ಮುಖಗಳಾಗಿದ್ದರು. ಆದರೆ ಅವರಿಬ್ಬರೂ ಹಳೆಯದ್ದೆನ್ನೆಲ್ಲ ಮರೆತು ಮಿತ್ರರಾಗಿ ಹಲವು ವೇದಿಕೆಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ.

ಅಶೋಕ್ ಮೋಚಿಯ ಅಂಗಡಿ ಉದ್ಘಾಟನೆಗೆ ಅನ್ಸಾರಿ ಬಂದಾಗ ಇಬ್ಬರು ಸುದ್ದಿಯ ಕೇಂದ್ರ ಬಿಂದುವಾದರು. ‘ಏಕತಾ’ ಎಂಬ ಹೆಸರಿನ ಚಪ್ಪಲಿ ಅಂಗಡಿಯ ಉದ್ಘಾಟನಾ ಸಮಾರಂಭದಲ್ಲಿ ಅನ್ಸಾರಿ ಸಹಬಾಳ್ವೆಯ ಸಂದೇಶವನ್ನು ಸಾರಿದರು.

ಗುಜರಾತ್ ಗಲಭೆಯಾಗಿ ಹಲವು ವರ್ಷಗಳ ಬಳಿಕ ಅಶೋಕ್ ಮೋಚಿ ಅಕ್ರಮದ ದಾರಿಯನ್ನು ವಿರೋಧಿಸಿ ಮುಂದೆ ಬಂದಿದ್ದರು. “ಹಿಂದಿನ ಕಾಲದಲ್ಲಿ ಕಷ್ಟದ ದಿನಗಳನ್ನು ಕಂಡವರು ನಾವು. ಮೋಚಿಯ ಜೀವನ ಸದಾ ಸಂತೋಷಕರವಾಗಿರಲಿ” ಎಂದು ಉದ್ಘಾಟನಾ ಸಮಾರಂಭದಲ್ಲಿ ಅನ್ಸಾರಿ ಹೇಳಿದರು.

“ಇದು ಜೀವನದ ಅಮೂಲ್ಯ ಕ್ಷಣಗಳಲ್ಲೊಂದು. ವಾಸಿಸಲು ಒಂದು ಮನೆಯೂ ಇಲ್ಲದ ನನಗೆ ಈ ಅಂಗಡಿ ಆ ನಿರೀಕ್ಷೆಯನ್ನು ನಿಜವಾಗಿಸೀತು” ಎಂದು ಅಶೋಕ್ ಹೇಳಿದರು. ಮನುಷ್ಯರೆಂಬ ನೆಲೆಯಲ್ಲಿ ನಾವೆಲ್ಲ ಒಂದು. ಇತರ ಧರ್ಮೀಯರನ್ನು ಗೌರವಿಸುವವರು ಎಂದು ಜಗತ್ತಿಗೆ ತೋರಿಸಿಕೊಡಲು ಸಾಧ್ಯವಿದೆ ಎಂದು ಮೋಚಿ ಹೇಳಿದರು. ಇಬ್ಬರು ಈ ಹಿಂದೆ ವಿವಿಧ ಕಾರ್ಯಕ್ರಮದಲ್ಲಿ ಜತೆಯಾಗಿ ಭಾಗವಹಿಸಿದ್ದಾರೆ.