ಸನ್ಮಾರ್ಗ ವಾರ್ತೆ-
ಚಂಡೀಗಢ; ಅ.24- ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯೊಂದು ಜರಗಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳು ಪ್ರಸಕ್ತ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತಿರುವಂತೆಯೇ ಜೆಜೆಪಿ (ಜನನಾಯಕ ಜನತಾ ಪಾರ್ಟಿ) ಎಂಬ ಹೊಸ ಪಕ್ಷವೊಂದು ರಾಷ್ಟ್ರದ ಗಮನ ಸೆಳೆದಿದೆ.
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೋ ಕಾಂಗ್ರೆಸ್ಸಿಗೋ ಸ್ವತಂತ್ರವಾಗಿ ಸರಕಾರ ರಚಿಸಲು ಸಾಧ್ಯವಾಗದ ಸ್ಥಿತಿ ಇರುವಂತೆಯೇ ಜೆಜೆಪಿ ಎಂಬ ಶಿಶುವಿಗೆ ಭಾರೀ ಡಿಮಾಂಡ್ ಬಂದಿದೆ. ವಿಶೇಷ ಏನೆಂದರೆ, ಜೇಜೆಪಿಯು ಹುಟ್ಟಿಕೊಂಡದ್ದು 2018 ಡಿಸೆಂಬರ್ 9 ರಂದು ಹರ್ಯಾಣದ ಜಿಮ್ ನಲ್ಲಿ ನಡೆದ ರಾಲಿಯಲ್ಲಿ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಅವರ ಮೊಮ್ಮಗ ಮತ್ತು ಸಂಸದರಾಗಿರುವ ದುಶ್ಯಂತ ಚೌತಾಲ ಅವರು ಅಂದು ಈ ಹೊಸ ಪಕ್ಷದ ಘೋಷಣೆ ಮಾಡಿದ್ದರು. ಈ ಪಕ್ಷ ಹುಟ್ಟಿಕೊಳ್ಳುವುದಕ್ಕೆ ಕುಟುಂಬ ಒಳಜಗಳವೇ ಕಾರಣವಾಗಿತ್ತು.
ಹರ್ಯಾಣವನ್ನು ದಶಕಗಳ ಕಾಲ ಆಳಿದ ಭಾರತ ರಾಷ್ಟ್ರೀಯ ಲೋಕದಳದ (INLD) ಕೌಟುಂಬಿಕ ಜಗಳದಿಂದಾಗಿ ಸಿಡಿದು ಸೃಷ್ಟಿಯಾದ ಪಕ್ಷವೇ ಜೆಜೆಪಿ. ಹರ್ಯಾಣವನ್ನು ದಶಕಗಳ ಕಾಲ ಚೌತಾಲ ಕುಟುಂಬ ಆಳಿದೆ. ದೇವಿಲಾಲ್, ಭಜನ್ ಲಾಲ್, ಹೆಸರುಗಳು 60ರ ದಶಕಗಳಿಂದೀಚೆಗೆ ಹರ್ಯಾಣದಲ್ಲಿ ಪಕ್ಷಾಂತರಕ್ಕೆ, ಪಕ್ಷ ವಿಭಜನೆಗೆ, ಹೊಸ ಪಕ್ಷ ಸ್ಥಾಪನೆಗೆ ಹೆಸರು ಗಳಿಸಿಕೊಳ್ಳುತ್ತಾ ಬಂದ ಹೆಸರುಗಳಾಗಿವೆ.
2018 ರ ಅಕ್ಟೋಬರ್ ತಿಂಗಳಲ್ಲಿ ಹರ್ಯಾಣದ ಗೊಹಾನದಲ್ಲಿ ನಡೆದ ಭಾರತ ರಾಷ್ಟ್ರೀಯ ಲೋಕದಳದ ರಾಲಿಯಲ್ಲಿ ಓಂ ಪ್ರಕಾಶ್ ಚೌತಾಲರ ಕೊನೆಯ ಪುತ್ರ ಅಭಯ್ ಚೌತಾಲರ ಮೇಲೆ ಹಲ್ಲೆ ನಡೆದಿತ್ತು. ಇದಕ್ಕೆ ಮೊಮ್ಮಗ ದುಶ್ಯಂತ ಹಾಗೂ ಅಭಯ್ ಅವರ ಕಿರಿಯ ಸಹೋದರ ದಿಗ್ವಿಜಯ್ ಚೌಟಾಲಾ ಕಾರಣ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ದುಶ್ಯಂತ ಹಾಗೂ ದಿಗ್ವಿಜಯ್ ಅವರನ್ನು ಲೋಕದಳದಿಂದ ಉಚ್ಚಾಟಿಸಲಾಗಿತ್ತು. ಈ ಇಬ್ಬರನ್ನು ಬೆಂಬಲಿಸಿದ್ದಕ್ಕಾಗಿ ದುಶ್ಯಂತರ ತಂದೆ ಅಜಯ್ ಚೌತಾಲರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು.
ಇವತ್ತು ಓಂ ಪ್ರಕಾಶ್ ಚೌತಾಲಾ ಮತ್ತು ಅವರ ಪುತ್ರ ಅಜಯ್ ಚೌತಾಲ ಇಬ್ಬರೂ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿದ್ದಾರೆ. ಕಿರಿಯ ಪುತ್ರ ಅಭಯ್ ಚೌತಾಲಾ ಇವತ್ತು ಲೋಕದಳದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ದುಶ್ಯಂತರ ತಾಯಿ ನೈನಾ ಚೌತಾಲಾ ಬಿಜೆಪಿಯಲ್ಲಿದ್ದಾರೆ.
ವಿಶೇಷ ಏನೆಂದರೆ, ಜನನಾಯಕ ಜನತಾ ಪಾರ್ಟಿಯ ಚಿನ್ನೆ ಕೀಲಿಕೈ. ಕಾಕತಾಳೀಯವೆಂಬಂತೆ ಹರ್ಯಾಣದ ಆಡಳಿತದ ಕೀಲಿಕೈ ಇವತ್ತು ದುಷ್ಯಂತರ ಕೈಯಲ್ಲಿದೆ.












