ಮುಸ್ಲಿಮೇತರರು ಮಸೀದಿ ಪ್ರವೇಶಿಸಬಾರದೆಂದೇ ಈವರೆಗೂ ನಾನು ಭಾವಿಸಿದ್ದೆ: ನಮಾಜ್ ನ ಸಾಲಿನಲ್ಲಿ ಶ್ರೀಮಂತನೂ ಬಡವನೂ ಸಮಾನ ಅನ್ನುವುದನ್ನು ಕಂಡು ಆಶ್ಚರ್ಯವಾಯ್ತು- ಮುಸ್ಲಿಮೇತರರಿಗೆ ತೆರೆದುಕೊಂಡ ಮುಂಬೈ ಮಸೀದಿ

0
2507

ಸನ್ಮಾರ್ಗ ವಾರ್ತೆ-

ಮುಂಬೈ:ಅ. 24- ಮುಸ್ಲಿಮೇತರರಿಗೆ ಮಸೀದಿಗೆ ಪ್ರವೇಶಿಸಲು ಅವಕಾಶವಿಲ್ಲ ಎಂದೇ ಜಿವಾಜಿರಾವ್ ಪಾಟೀಲ್ ಈವರೆಗೂ ನಂಬಿದ್ದರು. ಮುಂಬೈಯ ಮೀರಾ ರಸ್ತೆ ಪಕ್ಕದಲ್ಲಿರುವ ಸನಾ ಮಸೀದಿಯೊಳಗೆ ಇತ್ತೀಚೆಗೆ ಎರಡು ಗಂಟೆಗಳ ಕಾಲ ಸಮಯ ಕಳೆದ ಎರಡು ಡಜನ್ ಹಿಂದೂಗಳಲ್ಲಿ ಇವರೂ ಇದ್ದರು.

“ಇದು ಅದ್ಭುತ ಭಾವನೆ. ಇಂದು ನಾನು ಇಲ್ಲಿಗೆ ಯಾರಾದರೂ ಬರಬಹುದು ಎಂದು ಕಲಿತಿದ್ದೇನೆ. ಬಡವನು ಮಸೀದಿಗೆ ಮೊದಲು ಬಂದರೆ ನಮಾಝನಲ್ಲಿ ಮೊದಲ ಸಾಲಿನಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಾನೆಂದು ತಿಳಿದೆ. ವಿಶ್ವದ ಶ್ರೀಮಂತ ವ್ಯಕ್ತಿ ಕೊನೆಯದಾಗಿ ಬಂದರೆ ಕೊನೆಯ ಸಾಲಿನಲ್ಲಿ ನಮಾಜ್ ಗೆ ನಿಲ್ಲಬೇಕೆಂಬುದನ್ನು ತಿಳಿದು ಆಶ್ಚರ್ಯವಾಯಿತು ಎಂದು ಪಾಟೀಲ್ ಹೇಳಿದರು.

ಮುಸ್ಲಿಮೇತರರಿಗೆ ಮಸೀದಿಗಳನ್ನು ಪರಿಚಯಿಸುವ ಜಮಾಅತೆ ಇಸ್ಲಾಮಿ ಹಿಂದ್ ನ ಕಾರ್ಯಕ್ರಮದ ಭಾಗವಾಗಿ ಈ ಭೇಟಿ ನಡೆಯಿತು. ಮಸೀದಿಗೆ ಸ್ವಾಗತ ಎಂಬುದು ಈ ಕಾರ್ಯಕ್ರಮದ ಘೋಷ ವಾಕ್ಯವಾಗಿತ್ತು. ಮೀರಾ ರಸ್ತೆ ಮಸೀದಿಯ ನಿರ್ವಹಣೆಯ ಹೊಣೆ ಹೊತ್ತಿರುವ ಮಿಲ್ಲತ್ ವೆಲ್ಫೇರ್ ಅಸೋಸಿಯೇಶನ್‌ನ ಮೂಲಕ ಜಮಾಅತೆ ಇಸ್ಲಾಮಿ ಹಿಂದ್ ನ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ (SIO) ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಮಸೀದಿಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ನೀಗಿಸುವ ಮತ್ತು ಇಸ್ಲಾಮೋಫೋಬಿಯಾ ವಿರುದ್ಧ ಹೋರಾಡುವ ಉದ್ದೇಶದಿಂದ ಜಮಾಅತ್ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಿದೆ. “ನಾನು ಇಲ್ಲಿ ಕಲಿತ ಪ್ರಮುಖ ವಿಷಯವೆಂದರೆ ಮಸೀದಿ ಬಹಳ ಶಾಂತಿಯುತವಾಗಿದೆ ಮತ್ತು ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ನೀಡುತ್ತದೆ” ಎಂದು ಆಶಿಶ್ ಪಾಂಡೆ ಹೇಳಿದರು. ಇಮಾಮ್ ಮೌಲಾನಾ ಅಕ್ಬರ್ ಅವರು ಏಕತೆ, ಮಾನವೀಯತೆ ಮತ್ತು ಸಮಾನತೆಯ ಸಂದೇಶವನ್ನು ಒಳಗೊಂಡ ಕಿರು ಧರ್ಮೋಪದೇಶವನ್ನು ನೀಡಿದರು.