ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.26: ರಾಷ್ಟ್ರೀಯತೆ ಪ್ರಚೋದಿಸುವುದಕ್ಕೆ ಕಾಶ್ಮೀರ ಅಜೆಂಡಾ ಚುನಾವಣೆಯಲ್ಲಿ ಪ್ರಧಾನ ವಿಷಯ ಆಗಿ ಬಿಂಬಿಸಿ ಆಡಳಿತ ವಿರೋಧವನ್ನು ಮೀರಿ ನಿಲ್ಲಲು ಬಿಜೆಪಿಯಿಂದಾಗಿಲ್ಲ.
ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ಹರಿಯಾಣದಲ್ಲಿ ಕೇವಲ ಬಹುಮತ, ಸ್ವತಂತ್ರ ಸರಕಾರ ರಚಿಸುವ ಅವಕಾಶ ಕಳಕೊಂಡರೆ, ಮೂರರಲ್ಲಿ ಎರಡರಷ್ಟು ಸೀಟು ಗಳಿಸುವ ಉಮೇದಿನಲ್ಲಿದ್ದ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಅದೂ ಸಾಧ್ಯವಾಗಿಲ್ಲ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಹರಿಯಾಣ, ಮಹಾರಾಷ್ಟ್ರದ್ದಾಗಿದ್ದು ಜಮ್ಮು-ಕಾಶ್ಮೀರದ 370, 35ಎ ವಿಧಿಯನ್ನು ರದ್ದು ಪಡಿಸಿದ್ದನ್ನು ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಳಸಿಕೊಂಡಿತ್ತು.
ಆದರೆ, ದೇಶದಲ್ಲಿರುವ ಆರ್ಥಿಕ ಮಾಂದ್ಯ, ನಿರುದ್ಯೋಗದ ಮುಂದೆ ಇವ್ಯಾವ ದಾಳಗಳಿಗೂ ಜಯಭೇರಿ ಸಾಧ್ಯವಾಗಿಲ್ಲ. ಅಮಿತ್ ಶಾ, ಮೋದಿಯ ಲೆಕ್ಕಚಾರವನ್ನು ಮತದಾರರು ಈ ಸಲ ವಿಫಲವಾಗಿಸಿದ್ದಾರೆ.
ವೀರ್ ಸಾವರ್ಕರ್ಗೆ ಭಾರತ ರತ್ನದಂತಹ ಕಾರ್ಡನ್ನು ಮಹಾರಾಷ್ಟ್ರದ ಚುನಾವಣೆಯಲ್ಲಿ ಹರಿಯ ಬಿಟ್ಟರೂ ಬಿಜೆಪಿ ಅಧಿಕಾರಕ್ಕೆ ಬಂದರೂ ಶಿವಸೇನೆಯ ಸಖ್ಯದ ಆಧಾರ ಬೇಕೇ ಬೇಕು. ಅಲ್ಲಿಯೂ ಸ್ವತಂತ್ರವಾಗಿ ಪಕ್ಷವು ಸರಕಾರ ರಚಿಸುವಂತಿಲ್ಲ.
ಮಳೆಹಾನಿ, ನೆರೆ, ಬರ, ರೈತ ಸಮಸ್ಯೆಗಳ ಬಗ್ಗೆ ಜನರು ತಲೆ ಕೆಡಿಸಿಕೊಂಡು ಹಿಂದುತ್ವ ಅಜೆಂಡಾವನ್ನು ಮೂಲೆಗೆ ತಳ್ಳಿರುವುದು ಮಹಾರಾಷ್ಟ್ರದಲ್ಲಿ ಸ್ಪಷ್ಟವಾಗಿದೆ. ಸತಾರ ಲೋಕಸಭೆಯಿಂದ ಎಂಪಿ ಆಗಿದ್ದ ಶಿವಾಜಿ ಮಹಾರಾಜರ ವಂಶಸ್ಥ ಬಿಜೆಪಿ ಸೇರಿ ರಾಜೀನಾಮೆ ಕೊಟ್ಟು ಪುನಃ ಬಿಜೆಪಿಯಿಂದ ಸಂಸತ್ತಿಗೆ ಸ್ಪರ್ಧಿಸಿ ಎನ್ಸಿಪಿಯ ಮುಂದೆ ಹೀನಾಯ ಸೋಲು ಅನುಭವಿಸಿದ್ದು ಬಿಜೆಪಿಯ ಕುರಿತ ಮಮತೆಯ ಬಗ್ಗೆ ರಾಜಕೀಯದಲ್ಲಿ ವಿರೋಧಿ ಸಂಚಲನ ಮೂಡಿಸುವಲ್ಲಿ ನೆರವಾಗಿದೆ ಎಂದು ವರದಿ ತಿಳಿಸಿದೆ.
ಹರ್ಯಾಣದಲ್ಲಿ ಘಟಾನುಘಟಿ ಬಿಜೆಪಿ ಸಚಿವರೇ ಸಾಲು ಸಾಲಾಗಿ ಸೋಲುಂಡಿದ್ದಾರೆ. ಜನರು ಪ್ರತಿಪಕ್ಷದ ಜೊತೆ ನಿಂತಿದ್ದಾರೆ. ಮಹಾರಾಷ್ಟ್ರದಲ್ಲಿ ಗೋಫಿನಾಥ್ ಮುಂಡೆಯ ಪುತ್ರಿ ಸಚಿವೆ ಪಂಕಜಾ ಮುಂಡೆ ಸೋಲುಂಡಿದ್ದು ಕೂಡ ಬಿಜೆಪಿಗೆ ಆಘಾತವಾಗಿದೆ. ತನ್ನ ಮಲ ಸಹೋದರ ಎನ್ಸಿಪಿ ಅಭ್ಯರ್ಥಿಯ ವಿರುದ್ಧ ಪಂಕಜಾ ಸೋಲನುಭವಿಸಿದರು. ಒಟ್ಟಿನಲ್ಲಿ ಜನರು ಜನರಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಕುರಿತು ಚುನಾವಣೆಯಲ್ಲಿ ಜನಾದೇಶ ನೀಡಿದರು ಎಂದು ವರದಿಯಾಗಿದೆ.












