ಬಾಬರಿ ತೀರ್ಪು: ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸಿದ ಯುಪಿ ಸರಕಾರ

0
510

ಸನ್ಮಾರ್ಗ ವಾರ್ತೆ

ಲಕ್ನೊ,ನ.4: ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪು ಪ್ರಕಟವಾಗಲಿದ್ದು ಸಾಮಾಜಿಕ ಮಾಧ್ಯಮಗಳ ಮೇಲೆ ಉತ್ತರ ಪ್ರದೇಶ ಸರಕಾರ ನಿಗಾ ಇರಿಸಲು ತೀರ್ಮಾನಿಸಿದೆ. ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್ ಈ ವಿಷಯವನ್ನು ತಿಳಿಸಿದ್ದಾರೆ.

ವಿವಿಧ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳ ಕುರಿತು ನಿಗಾ ಇರಿಸಲು ವಿಶೇಷ ತಂಡವೊಂದನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು. ಆಕ್ಷೇಪಾರ್ಹ, ತೀವ್ರ ಭಾವನೆ ಕೆರಳಿಸುವ ರೀತಿಯ ಪೋಸ್ಟ್‌ಗಳನ್ನು ಪ್ರಕಟಿಸಿದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಪೂರ್ವ ತಯಾರಿ ಮಾಡಲಾಗಿದೆ. ಕಾನೂನು ವವಸ್ಥೆ ಕೆಡಿಸಲು ನೋಡುವವರ ವಿರುದ್ಧ ಯುಎಪಿಎ ಕಾನೂನು ಹೇರಲಾಗುವುದು ಎಂದು ಒಪಿ ಸಿಂಗ್ ಹೇಳಿದರು.

ಸುಪ್ರೀಂಕೋರ್ಟಿನ ತೀರ್ಪು ಪ್ರಕಟವಾಗುವ ವೇಳೆ ಸಚಿವರು ಬಹಿರಂಗ ಹೇಳಿಕೆ ನೀಡಬಾರದು ಎಂದು ಯೋಗಿ ಆದಿತ್ಯನಾಥ್ ನಿಷೇಧ ಹೇರಿದ್ದಾರೆ. ಪ್ರಕರಣದ ಕಕ್ಷಿಗಳನ್ನು ಬೆಂಬಲಿಸಿ ಅಥವಾ ವಿರೋಧಿಸಿ ಯಾರೂ ಮಾತಾಡಬಾರದು. ಈ ವಿಷಯದಲ್ಲಿ ವಿವಾದ ಹೇಳಿಕೆ ನೀಡದಂತೆ ಯೋಗಿ ಸೂಚನೆ ನೀಡಿದ್ದಾರೆ.

ಇದೇ ವೇಳೆ, ತೀರ್ಪು ಬರುವುದಕ್ಕಿಂತ ಮುಂಚಿತವಾಗಿ ತಮ್ಮ ಸುರಕ್ಷೆಗೆ ಪೊಲೀಸರನ್ನು ನಿಯೋಜಿಸಬೇಕೆಂದು ಅಯೋಧ್ಯೆಯ ಮುಸ್ಲಿಮರು ಆಗ್ರಹಿಸಿದ್ದಾರೆ. ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ಸುರಕ್ಷೆ ಒದಗಿಸಬೇಕೆಂದು ಜಮ್‌ಇಯ್ಯತ್ತುಲ್ ಉಲೇಮಾ ಹಿಂದ್ ಅಯೋಧ್ಯೆ ವಿಭಾಗ ಆಗ್ರಹಿಸಿದೆ.