ಸನ್ಮಾರ್ಗ ವಾರ್ತೆ-
ಬೆಂಗಳೂರು; ಡಿ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸರಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 15 ಮಂದಿ ಶಾಸಕರ ಪೈಕಿ 12 ಮಂದಿಯನ್ನು ಮತದಾರರು ಅರ್ಹರೆಂದು ಘೋಷಿಸಿದ್ದಾರೆ. ಉಳಿದ ಮೂವರಿಗೆ ಸೋಲಾಗಿದೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರಕಾರವನ್ನು ಉರುಳಿಸಲು ಕಾರಣವಾದ ಹದಿನೇಳು ಮಂದಿ ಶಾಸಕರು ಮುಂಬೈಯಲ್ಲಿ ಟಿಕಾಣಿ ಹೂಡಿದ್ದು ಮತ್ತು ಆ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಅವರನ್ನೆಲ್ಲ ಅನರ್ಹರು ಎಂದು ಘೋಷಿಸಿದ್ದು ಮತ್ತು ಪ್ರಕರಣ ಸುಪ್ರೀಂಕೋರ್ಟ್ ವರೆಗೆ ಹೋದದ್ದು ಈ ಎಲ್ಲವುಗಳ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಮಹತ್ವವನ್ನು ಪಡೆದುಕೊಂಡಿತ್ತು. ಈ ಚುನಾವಣೆಯಲ್ಲಿ ಕನಿಷ್ಠ ಆರು ಶಾಸಕರನ್ನಾದರೂ ಗೆಲ್ಲಿಸಿ ಕೊಳ್ಳದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು. ಅಲ್ಲದೇ 15 ಮಂದಿಗೆ ಬಿಜೆಪಿ ಟಿಕೆಟ್ ಅನ್ನು ನೀಡುವ ಮೂಲಕ ನೈತಿಕ ಅನೈತಿಕತೆ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಇದೀಗ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದಿದೆ. ಈ ಹನ್ನೆರಡು ಸ್ಥಾನಗಳು ಸೇರಿಕೊಂಡರೆ ಬಿಜೆಪಿಯ ಸಂಖ್ಯಾಬಲ 105 ರಿಂದ 115 ಏರಲಿದ್ದು ಪ್ರಸ್ತುತ 222 ಸದಸ್ಯಬಲವಿರುವ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತಕ್ಕೆ ಬೇಕಾಗಿರೋದು ಕೇವಲ 112 ಸದಸ್ಯ ಬಲ ಮಾತ್ರ.
ವಿಶೇಷ ಅಂದರೆ ಮತದಾನೋತ್ತರ ಸಮೀಕ್ಷೆ ಯು ಬಿಜೆಪಿಯ ಗೆಲುವನ್ನೇ ಕಣಿ ಹೇಳಿದ್ದು ಈಗ ಅದು ನಿಜವಾಗಿದೆ. ಈ ಮೂಲಕ ಮತದಾನೋತ್ತರ ಸಮೀಕ್ಷೆ ತನ್ನ ವಿಶ್ವಾಸವನ್ನು ಉಳಿಸಿಕೊಂಡಿದೆ.
ಕಾಂಗ್ರೆಸ್ಸಿನ 13 ಶಾಸಕರು ಜೆಡಿಎಸ್ ನ ಮೂರು ಮತ್ತು ಒಬ್ಬ ಪಕ್ಷೇತರ ಶಾಸಕರು ರಾಜೀನಾಮೆ ಕೊಟ್ಟದ್ದರಿಂದ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಈ ಹಿಂದೆ ಬಹುಮತವನ್ನು ಕಳೆದುಕೊಂಡು ಅಧಿಕಾರ ವಂಚಿತವಾಗಿತ್ತು. 105 ಸದಸ್ಯ ಬಲದ ಬಿಜೆಪಿ ಒಬ್ಬ ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಸರಕಾರ ರಚಿಸಿತು. ರಾಜೀನಾಮೆ ಕೊಟ್ಟ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಈಗ ಉಪ ಚುನಾವಣೆ ನಡೆದಿದೆ. ಈ ಮೂಲಕ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಸದಸ್ಯ ಬಲವನ್ನು ವೃದ್ಧಿಸಿಕೊಂಡಿದೆ. ಈಗಾಗಲೇ, ಫಲಿತಾಂಶಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಾವು ಸೋಲನ್ನು ಒಪ್ಪಿಕೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ನಾಯಕ ಆರ್ ಅಶೋಕ್ ಅವರು ಮಾತನಾಡಿ, ನೈತಿಕ ಇದ್ದರೆ ಸಿದ್ದರಾಮಯ್ಯ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಅನರ್ಹಗೊಂಡಿದ್ದಾರೆ ಎಂದು ಉಪಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿ ಗೆದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು ಕಟಕಿಯಾಡಿದ್ದಾರೆ.












