ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ.16: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಸೋಮವಾರವೂ ಮುಂದುವರಿದಿದೆ. ಜಾಮಿಯ ಮಿಲ್ಲಿಯ, ಅಲಿಗಡ ಯುನಿವರ್ಸಿಟಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ. ಅದರ ವಿರುದ್ಧ ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಟನೆ ಕಾರ್ಯಕ್ರಮಗಳು ನಡೆಯುತ್ತಿವೆ. ಲಕ್ನೊದ ಜಾಮಿಯಾ ನದ್ವದಲ್ಲಿ ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಕೊಲ್ಕತಾದಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರಾಲಿ ನಡೆಯಿತು.
ಪೊಲೀಸರ ಕ್ರೌರ್ಯದ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಜಾಮಿಯದ ವಿದ್ಯಾರ್ಥಿಗಳು ಇಂದು ಬೀದಿಗಿಳಿದರು. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ವಿದ್ಯಾರ್ಥಿಗಳು ಮಾನವ ಸಂಕಲೆ ಮೂಲಕ ಪ್ರತಿಭಟನೆ ನಡೆಸಿದರು. ಇದೇವೇಳೆ ಹೊಸ ಪೌರತ್ವ ಕಾನೂನಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಡಿ.18 ರಂದು ವಿಚಾರಣೆಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿತು.
ನಿನ್ನೆ ದಿಲ್ಲಿ ಪೊಲೀಸರು ಜಾಮಿಅ ಕ್ಯಾಂಪಸ್ಗೆ ನುಗ್ಗಿ ವಿದ್ಯಾರ್ಥಿಗಳ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ. ಪ್ರತಿಭಟನೆಯಲ್ಲಿದ್ದರು ಎಂದು ಆರೋಪಿಸಿ ಹಲವು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಗೆ ಪ್ರತಿಭಟನೆಕಾರರು ಜಾಥಾ ಬಂದುದರಿಂದ ಇವರನ್ನು ಬಿಡುಗಡೆಗೊಳಿಸಲಾಯಿತು. ಕೇರಳ ಸಹಿತ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಇಂದು ಮುಂದುವರಿಯುತ್ತಿದೆ.












