ಲೈಬ್ರರಿಯಲ್ಲಿ ತಮ್ಮ ಪಾಡಿಗೆ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದರು- ಜಾಮಿಅ ಉಪಕುಲಪತಿ

0
1091

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ.16: ಅನುಮತಿ ಪಡೆಯದೆ ಕ್ಯಾಂಪಸ್ ಗೆ ನುಗ್ಗಿ ದೌರ್ಜನ್ಯ ಎಸಗಿದ್ದಕ್ಕೆ ದಿಲ್ಲಿ ಪೊಲೀಸರ ವಿರುದ್ಧ ದೂರು ನೀಡಲಾಗುವುದು ಎಂದು ಜಾಮಿಅ ಮಿಲ್ಲಿಯ ಇಸ್ಲಾಮಿಯ್ಯ ವಿಶ್ವವಿದ್ಯಾನಿಲಯದ ಉಪಕುಲಪತಿ ನಜ್ಮಾ ಅಕ್ತರ್ ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ರವಿವಾರ ರಾತ್ರೆ ಜಾಮಿ ಅ ಮಿಲ್ಲಿಯ ಕ್ಯಾಂಪಸ್‍ಗೆ ನುಗ್ಗಿ ಪೊಲೀಸರು ದೌರ್ಜನ್ಯ ವೆಸಗಿದ್ದರು. ಘಟನೆಯ ಕುರಿತು ಉನ್ನತ ತನಿಖೆ ನಡೆಯಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಉಪಕುಲಪತಿ ಆಗ್ರಹಿಸಿದರು.

ಘರ್ಷಣೆಯಲ್ಲಿ ಇಬ್ಬರು ಜಾಮಿಅ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವದಂತಿ ಇದೆ, ಇದು ತಪ್ಪು. ಇನ್ನೂರು ಮಂಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಪೊಲೀಸರು ಧ್ವಂಸಮಾಡಿದ ವಸ್ತುಗಳನ್ನು ಪುನಃ ಮಾಡಿಸಿಕೊಳ್ಳಬಹುದು. ಆದರೆ ವಿದ್ಯಾರ್ಥಿಗಳ ಹಳೆಯ ಮನಸ್ಥಿತಿಯನ್ನು ಪುನಃ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಳೆದ ದಿವಸ ನಡೆದ ಘಟನೆ ದುರದೃಷ್ಟಕರವಾಗಿದೆ. ಪೊಲೀಸರ ಕ್ರಮಕ್ಕೆ ಯಾವುದೇ ಸಮರ್ಥನೆಯಿಲ್ಲ. ಪೊಲೀಸರು ಅನುಮತಿಯಿಲ್ಲದೆ ಕ್ಯಾಂಪಸ್ಸಿನೊಳಗೆ ನುಗ್ಗಿ ದೌರ್ಜನ್ಯ ನಡೆಸಿದರು. ಇದರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮಾನವ ಅಭಿವೃದ್ಧಿ ಸಚಿವರನ್ನು ವಿನಂತಿಸುವೆ. ಮುಖ್ಯವಾಗಿ ಲೈಬ್ರರಿಗೆ ನುಗ್ಗಿ ಪೊಲೀಸರು ಅತಿಕ್ರಮ ತೋರಿದರು. ನಿಷ್ಕಳಂಕರಾಗಿ ಅಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ. ಪೊಲೀಸರು ಲೈಬ್ರರಿ ನಾಶ ಮಾಢಿದರು. ತಪ್ಪಿತಸ್ಥರು ಯಾರೆಂದು ಕಂಡು ಹುಡುಕಿ ಕ್ರಮ ಜರಗಿಸಬೇಕು. ಕ್ಯಾಂಪಸ್ ಮತ್ತು ವಿದ್ಯಾರ್ಥಿಗಳ ಸುರಕ್ಷೆಯನ್ನು ಸರಕಾರ ಖಚಿತಪಡಿಸಬೇಕೆಂದು ಉಪಕುಲಪತಿ ಹೇಳಿದರು.