ಇಂದು ಎನ್‍ ಪಿ ಆರ್ ಸಭೆ- ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ: ಕಾಂಗ್ರೆಸ್ ಆಡಳಿತದ ರಾಜ್ಯಗಳ ನಿಲುವೇನು?

0
1170

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ.17: ಹೊದಿಕೆಯೊಳಗಿರುವ ಪೌರತ್ವ ಪಟ್ಟಿ ಎನ್‍ಪಿಆರ್ ಆಗಿದೆ ಎಂದು ಪ್ರತಿಪಕ್ಷಗಳ ಟೀಕೆಯ ನಡುವೆ ಗೃಹ ಸಚಿವಾಲಯ ತನ್ನ ಪ್ರಕ್ರಿಯೆಯನ್ನು ಮುಂದುವರಿಸಿದೆ. ಅದು ಕರೆದ ರಾಜ್ಯಗಳ ಸಭೆಯು ಶುಕ್ರವಾರ ದಿಲ್ಲಿಯಲ್ಲಿ ನಡೆಯುತ್ತಿದ್ದು ಪಶ್ಚಿಮ ಬಂಗಾಳದಿಂದ ಯಾವುದೇ ಅಧಿಕಾರಿ ಭಾಗವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಅಧಿಕೃತವಾಗಿ ಘೋಷಿಸದಿದ್ದರೂ ಕೇರಳದಿಂದಲೂ ಯಾರೂ ಭಾಗವಹಿಸುವ ಸಾಧ್ಯತೆಯಿಲ್ಲ.

ಎನ್‍ಪಿಆರ್ ಸಭೆಯಲ್ಲಿ ಭಾಗವಹಿಸಬೇಕಾಗಿಲ್ಲ, ಸೆನ್ಸಸ್‍ಗೆ ಸಂಬಂಧಿಸಿದ ಸಭೆಯಲ್ಲಿ ಮಾತ್ರ ಭಾಗವಹಿಸುವುದಾಗಿ ಕೇರಳ ತೀರ್ಮಾನಿಸಿದೆ. ಗೃಹ ಸಹ ಸಚಿವ ನಿತ್ಯಾನಂದರ ನೇತೃತ್ವದಲ್ಲಿ ಕರೆದ ಸಭೆಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊ , ಸರಕಾರದ ಪ್ರತಿನಿಧಿಗಳೋ ಭಾಗವಹಿಸಬೇಕೆಂದು ಸೂಚನೆ ನೀಡಲಾಗಿದೆ. ರಾಜ್ಯ ಸರಕಾರಗಳು ಎನ್‍ಪಿಆರ್ ಕೈಗೊಳ್ಳುವುದನ್ನು ದೃಢಪಡಿಸುವುದು ಇದರ ಉದ್ದೇಶವಾಗಿದೆ.

ಎನ್‍ಪಿಆರ್ ನೊಂದಿಗೆ ಅಸಹಕಾರ ಘೋಷಿಸಿದರೂ ಕೇರಳ, ಪಶ್ಚಿಮಬಂಗಾಳ ಕೊನೆಗೆ ಅದಕ್ಕೆ ಸಿದ್ಧವಾಗಬಹುದು ಎಂದು ಕೇಂದ್ರ ಸರಕಾರದ ನಿರೀಕ್ಷೆಯಾಗಿತ್ತು . ಹಾಗಾಗದಿದ್ದರೆ ಜನರಿಗೆ ಹಲವು ಯೋಜನೆಗಳ ಸೌಕರ್ಯ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಕೇರಳ, ಪಶ್ಚಿಮಬಂಗಾಲ ಎನ್‍ಪಿಆರ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ. ಎರಡು ರಾಜ್ಯಗಳು ಎನ್‍ಪಿಆರ್ ಕೈಬಿಟ್ಟಿರುವುದಾಗಿ ಹೇಳಿಲ್ಲ. ಎಪ್ರಿಲ್ ಒಂದರಿಂದ ಸೆಪ್ಟಂಬರ್ 30ರವರೆಗೆ ಮಾಹಿತಿ ಸಂಗ್ರಹಿಸಬೇಕಾಗಿದೆ. ತಮ್ಮ ನಿರ್ಧಾರ ಕೈಗೊಳ್ಳಲು ಮಾರ್ಚ್ ತಿಂಗಳವರೆಗೆ ಸಮಯ ಇದೆ. ಎರಡು ರಾಜ್ಯಗಳು ಮಾತ್ರ ದೂರ ಇದ್ದರೆ ಅದು ಯಶಸ್ವಿಯಾಗದು. ಎನ್‍ಪಿಆರ್ ಪ್ರಕ್ರಿಯೆ ನಿಲ್ಲಿಸುವುದಾಗಿ ಔಪಚಾರಿಕವಾಗಿ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳು ಘೋಷಿಸಿಲ್ಲ. ಎನ್‍ಪಿಆರ್ ಪ್ರಕ್ರಿಯೆ ಪ್ರಕಟಣೆ ನೀಡಿದ ರಾಜ್ಯಗಳೊಂದಿಗೆ ಅವೂ ಸೇರಿವೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ.