ಸನ್ಮಾರ್ಗ ವಾರ್ತೆ
ಕೊಲ್ಕತಾ, ಮಾ. 2: ಕೊಲ್ಕತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರ್ಯಾಲಿಯಲ್ಲಿ ಗೋಲಿಮಾರೊ ಸಾಲೋಂಕೊ ಎಂಬ ದ್ವೇಷಪೂರಿತ ಘೋಷಣೆ ಮೊಳಗಿಸಿದ ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸುರೇಂದ್ರ ಕುಮಾರ್ ತಿವಾರಿ, ದ್ರುಬಸು, ಪಂಕಜ್ ಪ್ರಸಾದ್ ಬಂಧಿತ ಆರೋಪಿಗಳು. ರವಿವಾರ ನ್ಯೂಮಾರ್ಕೆಟ್ ಪೊಲೀಸರು ಇವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಕಾರ್ಯಕ್ರಮ ನಡೆದ ಕೊಲ್ಕತಾ ಶಾಹಿದ್ ಮಿನಾರ್ ಮೈದಾನಕ್ಕೆ ಬಿಜೆಪಿ ಧ್ವಜದೊಂದಿಗೆ ಬಂದಿದ್ದ ಇವರು ದಿಲ್ಲಿಯ ಗಲಭೆಗೆ ಕಾರಣವಾದ ಗೋಲಿಮಾರೊ ಘೋಷಣೆ ಕೂಗಿದ್ದಾರೆ. ಪೊಲೀಸರಿದ್ದಾಗಲೇ ಮೂವರು ಈ ರೀತಿ ಘೋಷಣೆ ಹಾಕಿದ್ದರು.
ಇದರ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ. ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯ ಮುಹಮ್ಮದ್ ಸಲೀಂ ಸಹಿತ ಹಲವರು ವೀಡಿಯೊ ಟ್ವೀಟ್ ಮಾಡಿದ್ದರು. ಗಲಭೆಗೆ ಮಮತಾ ಬ್ಯಾನರ್ಜಿ ನೇತೃತ್ವ ನೀಡುತ್ತಿದ್ದಾರೆ ಮುಂತಾದ ಹೇಳಿಕೆಗಳನ್ನು ಸಭೆಯಲ್ಲಿ ಅಮಿತ್ ಶಾ ನೀಡಿದ್ದಾರೆ.












