ಸನ್ಮಾರ್ಗ ವಾರ್ತೆ
ಭೋಪಾಲ, ಮಾ. 4: ಶಾಸಕರನ್ನು ಖರೀದಿಸಿ ಮಧ್ಯಪ್ರದೇಶದಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬುಡಮೇಲು ಗೊಳಿಸುವ ಯತ್ನ ಬಿಜೆಪಿಯಿಂದ ನಡೆದಿದ್ದು ಮಧ್ಯರಾತ್ರೆ ಎಂಟು ಶಾಸಕರನ್ನು ಬಿಜೆಪಿ ಹರಿಯಾಣದ ಗುಡ್‍ಗಾಂವ್ ರೆಸಾರ್ಟ್ ಗೆ ವರ್ಗಾಯಿಸಿದ ಆರೋಪ ಕೇಳಿಬಂದಿದೆ. ಇವರಲ್ಲಿ ಒಬ್ಬರು ಮರಳಿ ಕಾಂಗ್ರೆಸ್ ಪಾಳಯ ಸೇರಲು ಸಿದ್ಧರಿದ್ದಾರೆಂದು ಕಾಂಗ್ರೆಸ್‍ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ನಾಲ್ವರು ಕಾಂಗ್ರೆಸ್ ಶಾಸಕರು, ಇಬ್ಬರು ಬಿಎಸ್ಪಿ , ಒಬ್ಬ ಸಮಾಜವಾದಿ ಪಾರ್ಟಿ, ಒಬ್ಬ ಪಕ್ಷೇತರ ಸದಸ್ಯ ರೆಸಾರ್ಟಿನಲ್ಲಿದ್ದಾರೆ. ಬಿಜೆಪಿ ನಾಯಕ ನರೋತ್ತಮ ಮಿಶ್ರರ ನೇತೃತ್ವದಲ್ಲಿ ಶಾಸಕರನ್ನು ತಡೆದಿರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಎಸ್ಪಿಯಿಂದ ಅಮಾನತುಗೊಂಡ ರಮಾಬಾಯಿ ಮರಳಿ ಬಂದಿದ್ದಾರೆ. ರೆಸಾರ್ಟಿನಲ್ಲಿರುವ ಶಾಸಕರಲ್ಲಿ ಒಬ್ಬರು ಮಾಜಿ ಸಚಿವ ಬಿಸಾಹುಲಾಲ್ ಸಿಂಗ್ ಕರೆ ಮಾಡಿದ್ದಾರೆ . ಅವರನ್ನು ಬಲವಂತದಿಂದ ಐಟಿಸಿ ಮರಾಠ ಹೋಟೆಲ್ಲಿನಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ. ಹೊರಗೆ ಬರಲು ಬಿಡುತ್ತಿಲ್ಲ ಎಂದು ತಿಳಿಸಿರುವುದಾಗಿ ಮಧ್ಯಪ್ರದೇಶ ವಿತ್ತ ಸಚಿವ ತರುಣ್ ಭಾನೊಟ್ ಎನ್‍ಡಿಟಿವಿಗೆ ಹೇಳಿದ್ದಾರೆ.
230 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 114 ಮತ್ತು ಬಿಜೆಪಿಯ 107 ಶಾಸಕರಿದ್ದಾರೆ. ಬಿಎಸ್‍ಪಿ ಎರಡು , ಎಸ್ಪಿ ಒಂದು, ಪಕ್ಷೇತರರು ನಾಲ್ವರು ಪಕ್ಷೇತರರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ. ಎರಡು ಶಾಸಕ ಸ್ಥಾನಗಳು ಖಾಲಿಯಿವೆ.












