ಸಿಎಎಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ- ತಜ್ಞರ ಅಭಿಮತ

0
940

ಸನ್ಮಾರ್ಗ ವಾರ್ತೆ

ನವದೆಹಲಿ: ಸಿಎಎ ವಿರುದ್ಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು (ಯುಎನ್‌ಹೆಚ್‌ಸಿಹೆಚ್ಆರ್) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರತಿಷ್ಠೆಗೆ ಮಾರಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ತಜ್ಞರು ಮತ್ತು ವಿದೇಶಿ ರಾಜತಾಂತ್ರಿಕರ ಪ್ರಕಾರ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯ ಈ ಕ್ರಮವು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ನಷ್ಟವನ್ನುಂಟು ಮಾಡಲಿದೆ. ಸಿಎಎಯನ್ನು ಸಂಸತ್ತು ಅಂಗೀಕರಿಸಿದಾಗಿನಿಂದ ಇದನ್ನು ತಾರತಮ್ಯದ ಕಾನೂನು ಎಂದು ಕರೆದು ದೇಶದ ತುಂಬಾ ಪ್ರತಿಭಟನೆಗಳಾಗುತ್ತಿವೆ. ಸಂಘಟನೆಗಳು ಇದರ ವಿರುದ್ಧ ಮಾತನಾಡುತ್ತಿವೆ. ಹಾಗೆಯೇ ಈ ಪ್ರತಿಭಟನೆಗಳಿಂದಾಗಿ ಸರ್ಕಾರ ತೀವ್ರ ಹಿನ್ನಡೆ ಅನುಭವಿಸಿದೆ ಎಂದು ಭಾರತೀಯ ವಿಶ್ವ ವ್ಯವಹಾರಗಳ ಕೌನ್ಸಿಲ್‌ನ ಹಿರಿಯ ಸಂಶೋಧಕರು ಹೇಳಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮಲೇಷ್ಯಾದ ಮಾಜಿ ಪ್ರಧಾನಿ ಮಹತೀರ್ ಮುಹಮದ್ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಬ್ ಉರ್ದುಗಾನ್ ಅವರಂತಹ ಹಲವಾರು ನಾಯಕರು ಸಿಎಎ ವಿರುದ್ಧ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ, ಇದನ್ನು ತಾರತಮ್ಯ ಎಂದು ಕರೆದಿದ್ದಾರೆ. ಈ ಕಾಯಿದೆಯ ವಿರುದ್ಧ ಯುರೋಪಿಯನ್ ಪಾರ್ಲಿಮೆಂಟ್‌ನ 600 ಕ್ಕೂ ಹೆಚ್ಚು ಸದಸ್ಯರು (ಎಂಇಪಿ) ಸಹಿ ಮಾಡಿದ ಕರಡು ನಿರ್ಣಯದ ಮೇಲೆ ಯುರೋಪಿಯನ್ ಪಾರ್ಲಿಮೆಂಟಿನಲ್ಲಿ ಚರ್ಚಿಸಲಾಯಿತು, ಅದರ ಮೇಲೆ ಮತದಾನವನ್ನು ಮುಂದಿನ ಅವಧಿಗೆ ಮುಂದೂಡಲಾಯಿತು. ಅಮೆರಿಕದ ಎರಡು ನಗರ ಮಂಡಳಿಗಳು ಈ ಕಾಯ್ದೆಯ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದೆ.

“ಸಿಎಎಯನ್ನು ಜನರ ಹಿತದೃಷ್ಟಿಯಿಂದ ತರಲಾಗಿದೆ ಎಂದು ಸರ್ಕಾರವು ಜಗತ್ತಿಗೆ ವಿವರಿಸಲು ಪ್ರಯತ್ನಿಸುತ್ತಿದೆ. ಆದರೆ ಅದು ಯಶಸ್ವಿಯಾಗುತ್ತಿಲ್ಲ. ಈಗ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಸಹ ಸಿಎಎ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದರಿಂದ, ಜಾಗತಿಕ ವೇದಿಕೆಯಲ್ಲಿ ಭಾರತವು ಹಲವಾರು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ”ಎಂದು ಇನ್ಸ್ಟಿಟ್ಯೂಟ್ ಆಫ್ ಕಾನ್ಫ್ಲಿಕ್ಟ್ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ವಿದ್ವಾಂಸ ಅಜಿತ್ ಸಿಂಗ್ ಹೇಳಿದ್ದಾರೆ.

ಚೀನಾದ ಮಾಜಿ ಭಾರತೀಯ ರಾಯಭಾರಿಯೊಬ್ಬರ ಪ್ರಕಾರ, ಜಾಗತಿಕ ಮಟ್ಟದಲ್ಲಿ, ಭಾರತವು ಮಾನವ ಹಕ್ಕುಗಳ ಮೌಲ್ಯಗಳನ್ನು ಎತ್ತಿಹಿಡಿಯಲು ಹೆಸರುವಾಸಿಯಾಗಿದೆ. ಆದರೆ UNHCHR ನ ಅರ್ಜಿಯು ಭಾರತದ ವರ್ಚಸ್ಸಿಗೆ ತೀವ್ರ ಪೆಟ್ಟು ನೀಡಲಿದೆ.