ಸನ್ಮಾರ್ಗ ವಾರ್ತೆ
ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರವು ಯೋಜಿತ ಮತ್ತು ಏಕಪಕ್ಷೀಯವಾಗಿದೆ ಎಂದು ದೆಹಲಿ ಅಲ್ಪಸಂಖ್ಯಾತ ಆಯೋಗ ಹೇಳಿರುವುದಾಗಿ ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಆಯೋಗವು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ತಯಾರಿಸಿದ ವರದಿಯಲ್ಲಿ ಈ ಹೇಳಿಕೆ ನೀಡಿದೆ. ಹಿಂಸಾಚಾರವು ಫೆಬ್ರವರಿ 23 ರಂದು ಪ್ರಾರಂಭವಾಯಿತು ಮತ್ತು ಐದು ದಿನಗಳವರೆಗೆ ಇದು ಮುಂದುವರಿಯಿತು. ಹಿಂಸೆಗೆ 47 ಜನರು ಬಲಿಯಾಗಿದ್ದಾರೆ
ಮುಸ್ಲಿಮರ ಒಡೆತನದ ಅಂಗಡಿಗಳು ಮತ್ತು ಮನೆಗಳನ್ನು ಗುರುತಿಸಲು ಹೊರಗಿನವರಿಂದ ಸಾಧ್ಯವಿಲ್ಲ. ಆದ್ದರಿಂದ ಈ ಹಿಂಸೆಯಲ್ಲಿ ಒಳಗಿನವರು ಭಾಗಿಯಾಗಿದ್ದಾರೆಂಬದು ಸ್ಪಷ್ಟ ಎಂದು ಆಯೋಗದ ಅಧ್ಯಕ್ಷ ಜಫರುಲ್ ಇಸ್ಲಾಮ್ ಖಾನ್ ಹೇಳಿದರು.
ಹೊರಗಿನಿಂದ ಸುಮಾರು 1,500 ರಿಂದ 2,000 ಜನರನ್ನು ದೆಹಲಿಗೆ ಕರೆತರಲಾಯಿತು ಮತ್ತು ಯೋಜಿತ ಪಿತೂರಿಯ ಭಾಗವಾಗಿ ದಾಳಿ ನಡೆಸುವ ಮೊದಲು ಹೆಚ್ಚಿನವರನ್ನು ಸುಮಾರು 24 ಗಂಟೆಗಳ ಕಾಲ ಶಾಲೆಗಳಲ್ಲಿ ಇರಿಸಲಾಗಿದೆ ಎಂದು ಖಾನ್ ದಿ ವೈರ್ ಪತ್ರಿಕೆಗೆ ತಿಳಿಸಿದರು. ಫೆಬ್ರವರಿ 24 ಮತ್ತು 25 ರಂದು ಪೊಲೀಸ್ ಉಪಸ್ಥಿತಿಯೂ ಕಡಿಮೆ ಇತ್ತು ಎಂದು ಅವರು ಹೇಳಿದ್ದಾರೆ. ಇದೀಗ ಆ ಹೊರಗಿನವರನ್ನು ಗುರುತಿಸುವುದು ಪೊಲೀಸರ ಕೆಲಸವಾಗಿದೆ.
ಪೊಲೀಸರು ಯಾರನ್ನೂ ರಕ್ಷಿಸಲಿಲ್ಲ ಮತ್ತು ಆಸ್ತಿ ಪಾಸ್ತಿ ಮತ್ತು ಜನರನ್ನು ಸುಡಲು ಅವಕಾಶ ಮಾಡಿಕೊಟ್ಟರು, ಗಲಭೆಕೋರರಿಗೆ ಮನೆಗಳನ್ನು ಹಾನಿ ಮಾಡಲು ಮತ್ತು ಅವುಗಳನ್ನು ಸ್ಫೋಟಿಸಲು ಸಹ ಅವಕಾಶ ಮಾಡಿಕೊಟ್ಟರು ಎಂದು ಖಾನ್ ಆರೋಪಿಸಿದರು. “ಎರಡು ದಿನಗಳ ನಂತರವೇ ಪೊಲೀಸರು ಸಕ್ರಿಯರಾದರು” ಎಂದ ಅವರು ಫೆಬ್ರವರಿ 26 ರಂದು ಹಿಂಸಾಚಾರ ಕಡಿಮೆಯಾಯಿತು ಮತ್ತು ಮರುದಿನ ಕೊನೆಗೊಂಡಿತು. ಆದ್ದರಿಂದ, ಪೊಲೀಸರು ತಮ್ಮ ನಿಷ್ಕ್ರಿಯತೆಗೆ ಉತ್ತರಿಸಬೇಕಾಗಿದೆ ಎಂದರು.
ದಿ ಹಿಂದೂ ಪ್ರಕಾರ, ಆಯೋಗವು ತನ್ನ ನಿಯೋಗ ಹೋದ ಎಲ್ಲೆಡೆ ಮುಸ್ಲಿಂ ಮನೆಗಳಿಗೆ ಮತ್ತು ಅಂಗಡಿಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಹೇಳಿದೆ. ಭಜನ್ಪುರ ಪ್ರದೇಶದಲ್ಲಿ, ಆಯೋಗವು ಮುಸ್ಲಿಂ ಒಡೆತನದ ಅಂಗಡಿಗಳನ್ನು ಲೂಟಿ ಮಾಡಿ ಸುಟ್ಟುಹಾಕಿದನ್ನು ಸ್ಪಷ್ಟಪಡಿಸಿಕೊಂಡಿದೆ. ಆದರೆ ಹಿಂದೂ ಒಡೆತನದ ಅಂಗಡಿಗಳನ್ನು ಮುಟ್ಟದಿರುವುದೂ ಬೆಳಕಿಗೆ ಬಂದಿದೆ. ಯಮುನಾ ವಿಹಾರದಲ್ಲಿ ಎರಡೂ ಸಮುದಾಯಗಳ ಅಂಗಡಿಗಳು ಮತ್ತು ಮನೆಗಳು ಹಿಂಸೆಗೆ ತುತ್ತಾಗಿರುವುದಾಗಿ ಸಮಿತಿಯ ವರದಿ ತಿಳಿಸಿದೆ.
ಭಾರತೀಯ ಜನತಾ ಪಕ್ಷದ ಮುಖಂಡ ಕಪಿಲ್ ಮಿಶ್ರಾ ಪೊಲೀಸರಿಗೆ ಬೆದರಿಕೆ ಹಾಕಿದ ಬೆನ್ನಲ್ಲೇ ಫೆಬ್ರವರಿ 23 ರಂದು ಹಿಂಸಾಚಾರ ಪ್ರಾರಂಭವಾಯಿತು ಎಂದು ಖಜುರಿ ಖಾಸ್ನ ಗಲ್ಲಿ ನಂಬರ್ 5 ರ ನಿವಾಸಿಗಳು ನಿಯೋಗಕ್ಕೆ ತಿಳಿಸಿದರು. “ಈ ಗಲ್ಲಿಯಲ್ಲಿ 100 ಜನರು ವಾಸಿಸುತ್ತಿದ್ದು, ಅವರು ಫೆಬ್ರವರಿ 25 ರ ಬೆಳಿಗ್ಗೆ ಪೊಲೀಸ್ ರಕ್ಷಣೆಯಲ್ಲಿ ಈ ಸ್ಥಳವನ್ನು ತೊರೆದರು. ಈ ಗಲ್ಲಿಯಲ್ಲಿ, ಬಿಎಸ್ಎಫ್ [ಬಾರ್ಡರ್ ಸೆಕ್ಯುರಿಟಿ ಫೋರ್ಸ್] ಜವಾನ ಮೊಹಮ್ಮದ್ ಅನಿಸ್ ಅವರ ಮನೆಯಿದ್ದು, ಅದಕ್ಕೆ ಹಾನಿಯೆಸಗಳಾಗಿದೆ.
ದೆಹಲಿ ಸರ್ಕಾರ ಘೋಷಿಸಿದ ಪರಿಹಾರವು ಅಸಮರ್ಪಕವಾಗಿದೆ ಮತ್ತು ಅದನ್ನು ದ್ವಿಗುಣಗೊಳಿಸಬೇಕು ಎಂದು ಆಯೋಗ ಹೇಳಿದೆ. ಉದಾಹರಣೆಗೆ, ಗ್ಯಾರೇಜ್ ಅನ್ನು ಸುಟ್ಟುಹಾಕಿದ ವ್ಯಕ್ತಿಯು ಸರ್ಕಾರ ಘೋಷಿಸಿದ ಪರಿಹಾರದಿಂದ ಮರಳಿ ಗ್ಯಾರೇಜು ಕಟ್ಟಲು ಸಾಕಾಗದು ಎಂದವರು ಹೇಳಿದ್ದಾರೆ.
ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗುವುದು ಎಂದು ಖಾನ್ ಇದೇವೇಳೆ ಹೇಳಿದರು.












