ಸನ್ಮಾರ್ಗ ವಾರ್ತೆ
ಚಂಡಿಗಡ, ಮಾ. 5: ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿದ ಬಿಜೆಪಿ ನಾಯಕ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ಸಹಿತ ಪೌರತ್ವ ಸಾಬೀತುಪಡಿಸುವ ದಾಖಲೆಗಳು ರಾಜ್ಯ ಸರಕಾರದ ಬಳಿ ಇಲ್ಲ ಎಂದು ವರದಿಯಾಗಿದೆ. ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಮತ್ತು ರಾಜ್ಯ ಸಚಿವರ ಪೌರತ್ವ ಸಾಬೀತು ಪಡಿಸುವ ದಾಖಲೆಗಳಿಲ್ಲ.
ಜನವರಿ 20ಕ್ಕೆ ಪಾನಿಪತ್ ಕೇಂದ್ರವಾಗಿ ಕಾರ್ಯನಿರ್ವಹಿಸುವ ಸಾಮಾಜಿಕ ಕಾರ್ಯಕರ್ತರು ಮಾಹಿತಿ ಹಕ್ಕು ಕಾನೂನು ಪ್ರಕಾರ ಸಲ್ಲಿಸಿದ ಅರ್ಜಿಯಲ್ಲಿ ಹೀಗೆ ಉತ್ತರ ಸಿಕ್ಕಿದೆ. ಮುಖ್ಯ ಮಂತ್ರಿ ಸಹಿತ ಹಲವು ಪ್ರಮುಖರ ಬಳಿ ಪೌರತ್ವ ಸಾಬೀತು ಪಡಿಸುವ ದಾಖಲೆಗಳಿಲ್ಲ ಎಂದು ರಾಜ್ಯದ ಮಾಹಿತಿ ಹಕ್ಕು ಅಧಿಕಾರಿ ಪಿ ಪಿ ಕಪೂರ್ ತಿಳಿಸಿದ್ದಾರೆ.
ಅನಧಿಕೃತ ವಲಸೆ ತಡೆಯುವ ರಾಷ್ಟ್ರೀಯ ಪೌರತ್ವ ನೋಂದಣಿ ಹರಿಯಾಣದಲ್ಲಿ ಜಾರಿಗೆ ತರುವುದಾಗಿ ಕಳೆದ ಸೆಪ್ಟಂಬರ್ ಚುನಾವಣೆಯಲ್ಲಿ ಕಟ್ಟರ್ ಹೇಳಿದ್ದರು. ಈ ಘೋಷಣೆ ಮಾಡಿದ ಮುಖ್ಯಮಂತ್ರಿ ಬಳಿ ಪೌರತ್ವ ಸಾಬೀತು ಪಡಿಸುವ ದಾಖಲೆಗಳಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಬಂದ 1500 ಮಂದಿ ಹರಿಯಾಣದಲ್ಲಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಕಳೆದ ಜನವರಿಯಲ್ಲಿ ತಿಳಿಸಿದ್ದರು. ಇದರಲ್ಲಿ ಒಂದು ಮುಸ್ಲಿಂ ಕುಟುಂಬವೂ ಇದೆ ಎಂದು ಅವರು ಹೇಳಿದ್ದರು.












