ಸನ್ಮಾರ್ಗ ವಾರ್ತೆ
ಪುಣೆ, ಮಾ. 6: ಸಾಮಾಜಿಕ ಕಾರ್ಯಕರ್ತ ನರೇಂದ್ರ ಧಾಬೋಲ್ಕರ್ ರ ಕೊಲೆಗೆ ದುಷ್ಕರ್ಮಿಗಳು ಬಳಸಿದ್ದ ಬಂದೂಕನ್ನು ಸಮುದ್ರದಿಂದ ನಾರ್ವೇ ತಂತ್ರಜ್ಞಾನ ಬಳಸಿ ಹೊರತೆಗೆಯಲಾಗಿದೆ. ಸಮುದ್ರದಲ್ಲಿ ನಲ್ವತ್ತು ಅಡಿ ಆಳದಲ್ಲಿ ಮರಳು ಗುಡ್ಡೆಯ ಕೆಳಗೆ ಪ್ರಧಾನ ಸಾಕ್ಷ್ಯವಾದ ಬಂದೂಕನ್ನು ಸಿಬಿಐ ವಶಕ್ಕೆ ನೀಡಲಾಗಿದೆ. ಏಳೂವರೆ ಕೋಟಿ ರೂಪಾಯಿ ವೆಚ್ಚದಿಂದ ಕಡಲಿನ ಒಳಗಿನಿಂದ ಬಂದೂಕನ್ನು ಹೊರತರಲಾಗಿದೆ. ದುಬೈಯಲ್ಲಿ ಕೇಂದ್ರವಿರುವ ಎನ್ವಿಟೆಕ್ ಮರೈನ್ ಕನ್ಸಲ್ಟಂಟ್ ನೋರ್ವಿಜಿಯನ್ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಂದೂಕು ಪತ್ತೆ ಹಚ್ಚಲಾಯಿತು. ಯುಕ್ರೇನ್ನ ಮುಳುಗು ತಜ್ಞರು ಬಂದೂಕು ಪತ್ತೆ ಹಚ್ಚಿದರು. ಸಮುದ್ರದ ಆಳದ ಮರಳು ಗುಡ್ಡದಡಿಯಲ್ಲಿ ಬಂದೂಕು ಇತ್ತು. ಬಂದೂಕನ್ನು ಹುಡುಕಿ ಹೊರತೆಗೆಯಲು ಏಳೂವರೆ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಬಂದೂಕನ್ನು ಬ್ಯಾಲಿಸ್ಟಿಕ್ ಟೆಸ್ಟ್ ಗೆ ಕಳುಹಿಸಿಕೊಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪರೀಕ್ಷೆಯಲ್ಲಿ ಈ ಬಂದೂಕನ್ನು ಧಾಬೋಲ್ಕರ್ ಹತ್ಯೆಗೆ ಮಾತ್ರ ಬಳಸಲಾಗಿತ್ತೇ ಎಂದು ತಿಳಿದು ಬರಲಿದೆ. ಧಾಬೊಲ್ಕರ್ ರನ್ನು ಕೊಲೆಮಾಡಿದ ವ್ಯಕ್ತಿ ಪತ್ರಕರ್ತೆ ಗೌರಿ ಲಂಕೇಶ್ರ ಹತ್ಯೆ ಮಾಡಿದ್ದರೆಂದು ಸಿಬಿಐ ಪತ್ತೆ ಮಾಡಿತ್ತು. ಇಬ್ಬರ ಕೊಲೆಗೆ ಬಳಸಿದ್ದು ಒಂದೇ ಬಂದೂಕು ಎಂದು ತನಿಖೆಯಲ್ಲಿ ಗೊತ್ತಾಗಿತ್ತು. ಆದ್ದರಿಂದ ಎರಡೂ ಪ್ರಕರಣಗಳ ಪ್ರಧಾನ ಸಾಕ್ಷ್ಯವಾದ ಬಂದೂಕು ಹುಡುಕಲು ಸಿಬಿಐ ಸಿದ್ಧವಾಯಿತು. ಧಾಬೋಲ್ಕರ್ ರಿಗೆ ಗುಂಡು ಹಾರಿಸಿದ ಶರತ್ ಕಲಾಸ್ಕರ್ ಬಂದೂಕನ್ನು ಕಡಲಿಗೆ ಎಸೆದಿದ್ದೇನೆಂದು ತಿಳಿಸಿದ್ದ. ಬಂಡೆಕಲ್ಲುಗಳು ಮತ್ತು ಬಲವಾದ ಅಲೆಗಳಿದ್ದ ಸಮುದ್ರದಿಂದ ಬಂದೂಕು ಹೊರತೆಗೆಯುವುದು ತುಂಬ ಪ್ರಯಾಸದ ಕಾರ್ಯವಾಗಿತ್ತು.












