ಸನ್ಮಾರ್ಗ ವಾರ್ತೆ
ಮಂಗಳೂರು; ಮಾ. 12- ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಎನ್ ಪಿ ಆರ್ ಅನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಿ ದ ಪೀಪಲ್ ಆಫ್ ಇಂಡಿಯಾ ಸಂಘಟನೆಯ ಆಶ್ರಯದಲ್ಲಿ ಮಂಗಳೂರಿನ ಹಂಪನಕಟ್ಟೆಯ ಮಿನಿ ವಿಧಾನಸೌಧದ ಎದುರಿನ ಕ್ಲಾಕ್ ಟವರ್ ಬಳಿಯಲ್ಲಿ ಏಕದಿನ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆಯ 90ನೇ ವರ್ಷದ ನೆನಪಿನ ಹಿನ್ನೆಲೆಯಲ್ಲಿಯೂ ಈ ಸತ್ಯಾಗ್ರಹಕ್ಕೆ ಮಹತ್ವ ಲಭಿಸಿದೆ. ಬೆಳಗ್ಗೆ 10ಕ್ಕೆ ಈ ಸತ್ಯಾಗ್ರಹ ಆರಂಭಗೊಂಡಿದ್ದು, ಸಂಜೆ 5ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಏಕಕಾಲದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸತ್ಯಾಗ್ರಹ ಸಭೆಯು ಭಾಷಣ, ಹಾಡು, ಆಝಾದಿ ಘೋಷಣೆ ಮುಂತಾದುವುಗಳ ಮೂಲಕ ಗಮನ ಸೆಳೆಯುತ್ತಿದೆ. ಪತ್ರಕರ್ತ ನಂದ ಗೋಪಾಲ, ಸಚಿತಾ ನಂದಗೋಪಾಲ, ಶೇಖರ ಲಾಯಿಲಾ, ವಿದ್ಯಾ, ಮುಹಮ್ಮದ್ ಕುಂಞಿ, ಅಥಾವುಲ್ಲಾ ಜೋಕಟ್ಟೆ, ರಫೀವುದ್ದೀನ್ ಕುದ್ರೋಳಿ, ಉಮರ್ ಯು ಹೆಚ್., ಹೈದರ್ ಪರ್ತಿಪ್ಪಾಡಿ, ಜಲೀಲ್ ಕೃಷ್ಣಾಪುರ, ಮಾಜಿ ಮೇಯರ್ ಅಶ್ರಫ್ ಬಂದರ್, ಸುಲೈಮಾನ್ ಕಲ್ಲರ್ಪೆ, ಅಮೀರ್ ತುಂಬೆ, ಉಮೈರಾ ಬಾನು, ಶಹನಾಜ್ ಬೋಳಾರ್, ರಹ್ಮತ್ ಮನ್ಸೂರ್, ಸಯೀದ್ ಇಸ್ಮಾಯಿಲ್, ಕೆ ಎಂ ಷರೀಫ್ ಸಹಿತ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಶಾಸಕ ಜೆ ಆರ್ ಲೋಬೊ ಅವರು ಭಾಗವಹಿಸಿದ್ದಾರೆ.













