ಆಸ್ಪತ್ರೆಯಲ್ಲಿ ಉಳಿಯೋಣವೆಂದರೆ ತಾಯಿಗೆ ದಿಕ್ಕಿಲ್ಲ, ಮನೆಯಲ್ಲಿದ್ದರೆ ಆಸ್ಪತ್ರೆಗೆ ಹೋಗುವಂತಿಲ್ಲ: ಕಿಡ್ನಿ ರೋಗಿ ರಾಮದಾಸ್ ರ ಅಳಲು; ವೀಡಿಯೊ

0
1454
  • ಸನ್ಮಾರ್ಗ ವಾರ್ತೆ

ಮಂಗಳೂರು; ಮಾರ್ಚ್ 31- ಲಾಕ್ ಡೌನ್ ಮತ್ತು ಬಂದ್ ನಿಂದಾಗಿ ವಲಸೆ ಕಾರ್ಮಿಕರು, ದಿನಗೂಲಿಗಳು, ಬಡವರು ಮುಂತಾದವರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಧ್ಯಮಗಳಿಂದ ನಡೆಯುತ್ತಿದೆಯಾದರೂ ನಿತ್ಯ ರೋಗಿಗಳ ಕುರಿತಂತೆ ಗಮನ ಹರಿದಿರುವುದು ಕಡಿಮೆ. ಕಿಡ್ನಿ ರೋಗಿಗಳು ಇವರಲ್ಲಿ ಒಬ್ಬರು. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾದ, ಹೆಚ್ಚು ನಡೆಯಬಾರದ ಮತ್ತು ಡಯಾಲಿಸಿಸ್ ಮಾಡದೆ ಹೋದರೆ ಜೀವಕ್ಕೆ ಅಪಾಯ ಎದುರಾಗಬಹುದಾದ ಇವರಿಗೆ ಸೇವಾಸಂಸ್ಥೆಗಳು ಹುಡುಕಿ ಹುಡುಕಿ ನೆರವಾಗಬೇಕಿದೆ. ಜಿಲ್ಲಾಡಳಿತ ಇವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಇವರ ಸುಗಮ ಸಂಚಾರಕ್ಕೆ ಏರ್ಪಾಡು ಮಾಡಬೇಕಿದೆ.

ಇಲ್ಲೊಬ್ಬರು ರಾಮದಾಸ್ ಅನ್ನುವ ಕಿಡ್ನಿ ರೋಗಿ ತನ್ನ ಸಂಕಟವನ್ನು ಸನ್ಮಾರ್ಗ ದೊಂದಿಗೆ ತೋಡಿಕೊಂಡಿದ್ದಾರೆ. ಎರಡು ಹೆಣ್ಣು ಮಕ್ಕಳಿರುವ ಮತ್ತು ಹಿಂದೆ ರಿಕ್ಷಾ ಚಾಲನೆ ಮಾಡಿ ಹೊಟ್ಟೆ ತುಂಬಿಸುತ್ತಿದ್ದ ಅವರನ್ನು ಲಾಕ್ ಡೌನ್ ತೀವ್ರವಾಗಿ ಬಾಧಿಸಿದೆ. ಅವರು ತನ್ನ ಮನೆಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ದೇರಳಕಟ್ಟೆ ಸಮೀಪದ ಯೇನಪೋಯ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಕೊಳ್ಳಲೇ ಬೇಕಿದೆ. ಮೊನ್ನೆ ಲಾಕ್ ಡೌನ್ ಸಮಯದಲ್ಲಿ ಅವರು ಸುಮಾರು ಐದು ಕಿಲೋಮೀಟರ್ ದೂರ ನಡೆದುಕೊಂಡೇ ಬಂದಿದ್ದಾರೆ. ನೇತ್ರಾವತಿ ಸೇತುವೆ ಬಳಿ ತಲುಪಿದಾಗ ಪರಿಚಿತ ವ್ಯಕ್ತಿ ನೆರವಾಗಿದ್ದಾರೆ. ಇದು ಓರ್ವ ರಾಮದಾಸರ ಕತೆಯಲ್ಲ. ಇಂಥವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ವಯಸ್ಸಾದ ಅಮ್ಮನ ಜೊತೆ ಮಂಗಳೂರಿನ ಹೊಯ್ಗೆ ಬಜಾರ್ ನ ತನ್ನ ಮನೆಯಲ್ಲಿ ಇರುವ ಇವರಿಗೆ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ರಾಜ್ಯ ತರಬೇತಿ ವಿಭಾಗದ ನಾಯಕ ಅಮೀರ್ ಕುದ್ರೋಳಿ ಮತ್ತು ಆಸಿಫ್ ಕುದ್ರೋಳಿಯವರು ನೆರವಿಗೆ ಬಂದು ಡಯಾಲಿಸಿಸ್ ಗೆ ನೆರವಾಗಿದ್ದಾರೆ. ರಾಮದಾಸರ ಸಂಕಟವನ್ನು ಅವರ ಬಾಯಿಂದಲೇ ಕೇಳಿ…

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.