ಮಳೆ ಮತ್ತು ಆಕೆ

0
1415

ಏ. ಕೆ. ಕುಕ್ಕಿಲ

ಧಾರಾಕಾರ ಮಳೆ. ಜೊತೆಗೇ ಮಿಂಚು, ಗುಡುಗು ಮತ್ತು ಸಿಡಿಲು. ವರಾಂಡದಲ್ಲಿ ತೂಗುತ್ತಿದ್ದ ಕೊಡೆಯನ್ನು ಎತ್ತಿಕೊಂಡ ಆತ ಬೀಸುನಡಿಗೆಯಲ್ಲಿ ಮಸೀದಿಯ ಹಿಂಭಾಗದಲ್ಲಿರುವ ಆ ವಿಶಾಲ ಜಾಗದತ್ತ ಹೊರಟ. ದಾರಿ ತುಂಬಾ ಆತನೊಳಗೆ ಆಕೆಯೇ ತುಂಬಿಕೊಂಡಿದ್ದಳು. ಮಿಂಚೆಂದರೆ ಆಕೆಗೆ ಎಲ್ಲಿಲ್ಲದ ಭಯ. ಮಳೆಯೆಂದರೆ ಸಮುದ್ರದಷ್ಟೇ ಪ್ರೀತಿ. ಗುಡುಗು, ಸಿಡಿಲಿನ ವೇಳೆ ಆಕೆ ಆತನ ಎದೆಯಲ್ಲಿ ಮಗುವಾಗಿ ಮಲಗುತ್ತಿದ್ದಳು. ಮಳೆಗಾಲದಲ್ಲಿ ಒಂಟಿಯಾಗಿರುವುದು ಆಕೆಗೆ ಇಷ್ಟವೇ ಅಲ್ಲ. ಆಕೆಯೆಂದರೆ ಆತನಿಗೆ ಬದುಕು, ಭಾವನೆ, ಕಾವ್ಯ, ಕತೆ, ಕೌತುಕ… ಎಲ್ಲವೂ.
ಮಸೀದಿಯ ಹಿಂಭಾಗಕ್ಕೆ ತಲುಪಿದ ಆತ, ಆಕೆಗೆ ಕೊಡೆ ಹಿಡಿದ. ನಾನಿದ್ದೇನೆ ಅಂದ. ಒದ್ದೆಯಾದ ಕಣ್ಣನ್ನು ಒರೆಸಿಕೊಂಡ. ಪವಾಡವೆಂಬಂತೆ ಮಳೆ ನಿಂತಿತು. ಮಿಂಚು ಕಣ್ಮರೆಯಾಯಿತು. ಆತ ನಗುತ್ತಾ ಅಲ್ಲಿಂದ ಹೊರಬಂದ. ಮಸೀದಿಯ ಗುರುಗಳು ಅಚ್ಚರಿಯಿಂದ ಆತನನ್ನೇ ನೋಡುತ್ತಾ ನಿಂತಿದ್ದರು. ಈ ಮಳೆಯಲ್ಲಿ ಶ್ಮಶಾನದಿಂದ ನಗುತ್ತಾ ಬರುವ ಆತನಿಗೆ ಏನೋ ತೊಂದರೆಯಿದೆ ಎಂದು ಅವರ ಮನಸ್ಸು ಬಲವಾಗಿಯೇ ವಾದಿಸುತ್ತಿತ್ತು.