ಮೀಜೊರಾಮ್ ರಾಜ್ಯಪಾಲರಾಗಿ ಹಿಂದೂ ಐಕ್ಯ ವೇದಿಯ ನಾಯಕ ರಾಜಶೇಖರನ್: ಬೀದಿಗಿಳಿದ ಜನತೆ  

0
3944

ಸಲೀಮ್ ಬೋಳಂಗಡಿ
ಇಂದು ಮಿಜೋರಾಮ್ ರಾಜ್ಯಪಾಲರಾಗಿ ಕುಮ್ಮನಮ್ ರಾಜಶೇಖರನ್ ಅಧಿಕಾರ ಸ್ವೀಕರಿಸಲಿದ್ದಾರೆ. ಕೇರಳದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜ್ಯಪಾಲ ಹುದ್ದೆಯನ್ನು ವಹಿಸಿದ್ದಾರೆ.  ಕುಮ್ಮನಮ್ ರಾಜಶೇಖರನ್‍ರನ್ನು ರಾಜ್ಯಪಾಲ ಹುದ್ದೆಗೆ ನೇಮಕ ಮಾಡಿರುವುದರ ವಿರುದ್ಧ ಮಿಝೋರಾಮ್ ನಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ. ಕುಮ್ಮನಮ್ ರಾಜ್ಯಪಾಲರಾಗುವುದನ್ನು ಖಂಡಿಸಿ ಕ್ರೈಸ್ತ ಸಂಘಟನೆಯಾದ ಗ್ಲೋಬಲ್ ಕೌನ್ಸಿಲ್ ಆಫ್ ಇಂಡಿಯನ್ ಕ್ರೈಸ್ಟ್ (ಜಿಸಿಐಸಿ) ಮತ್ತು ಮಿಝೋರಾಮ್ ನಾಗರಿಕರ ಹಿತಕ್ಕಾಗಿ ಕಾರ್ಯಾಚರಿಸುತ್ತಿರುವ ಒಕ್ಕೂಟವಾದ ‘ಪ್ರಿಝಮ್” ರಂಗಕ್ಕಿಳಿದಿದೆ. ಸಕ್ರಿಯ ರಾಜಕಾರಣದಿಂದ ದೂರವಿರುವ ಓರ್ವರನ್ನು ರಾಜ್ಯಪಾಲರಾಗಿ ನೇಮಿಸಬೇಕೆಂಬುದು ಸಂಘಟನೆಯ ಉದ್ಧೇಶವಾಗಿದೆ. ಉಗ್ರ ಹಿಂದುತ್ವವಾದಿ, ಸಕ್ರಿಯ ರಾಜಕಾರಣಿಯಾಗಿರುವ ಓರ್ವರಿಗೆ ರಾಜ್ಯಪಾಲ ಹುದ್ದೆ ನೀಡಲಾಗಿದೆ ಎಂದು ಫ್ರೀಝಮ್ ಆರೋಪಿಸಿದೆ.
ಇತ್ತೀಚೆಗೆ ರಾಜ್ಯಪಾಲ ಹುದ್ದೆಯೆಂಬುದು ಒಂದು ಪಕ್ಷದ ಪ್ರತಿನಿಧಿಯೆಂಬಂತಹ ಹಲವು ಘಟನೆಗಳು ಈ ದೇಶದಲ್ಲಿ ನಡೆದಿದೆ. ಆ ಹುದ್ದೆಗಿರುವ ಘನತೆ, ಗಾಂಭೀರ್ಯತೆಯನ್ನು ಪ್ರಶ್ನಿಸುವ ರೀತಿಯಲ್ಲಿ ಕೆಲ ರಾಜ್ಯಪಾಲರು ತಳೆದ ಪಕ್ಷಪಾತಿ ನಿಲುವುಗಳು  ಇತ್ತೀಚೆಗೆ ಧಾರಾಳವಾಗಿದೆ, ಆದರೆ ಈ ಹಿಂದೆ ಇಂತಹ ಘಟನೆಗಳು ನಡೆದಿಲ್ಲವೆಂದಲ್ಲ, ಆದರೆ ಇಷ್ಟು ಬಹಿರಂಗವಾಗಿ ಆಡಳಿತ ಪಕ್ಷದ  ಹಿತ ಕಾಪಾಡಲು ಮುಂದಾದದ್ದಿಲ್ಲ. ಅದರಲ್ಲೂ ಗೋವಾ ಮತ್ತು ಮಣಿಪುರದ ಘಟನೆ  ಪ್ರಜಾಪ್ರಭುತ್ವದ ಪಾಲಿಗೆ ಅಪಾಯಕಾರಿಯಾಗಿದೆ. ಈ ಘನ ಜವಾಬ್ದಾರಿಕೆಯ ಹುದ್ದೆ ನೀಡುವಾಗ  ಕೇಂದ್ರ  ಅವರ ಯೋಗ್ಯತೆಯನ್ನು ಗಮನಿಸಬೇಕು.
ಬಿಜೆಪಿಯ ಪ್ರಾಥಮಿಕ ಸದಸ್ಯ ಕೂಡಾ ಆಗಿಲ್ಲದಿದ್ದಾಗ ಕುಮ್ಮಾನಮ್ ಪಕ್ಷದ ಅದ್ಯಕ್ಷಗಾದಿಗೆ ಏರಿದ್ದನ್ನು ಪ್ರಜಾಪ್ರಭುತ್ವದ ಮೇಲೆ ಭರವಸೆ ಇಟ್ಟವರು ಬೆಚ್ಚಿ ಬೀಳುವಂತೆ ಮಾಡಿತ್ತು. ಕೇರಳದ ಮಣ್ಣಿನಲ್ಲಿ ಕೋಮು ಫಸಲು ತೆಗೆಯುವ ಉದ್ದೇಶವನ್ನು ಬಿಜೆಪಿ ನಾಯಕತ್ವ ಹೊಂದಿತ್ತು. ಅದರಲ್ಲಿ ತೀವ್ರವಾಗಿ ಅವರು ವಿಫಲರಾಗಿದ್ದಾರೆಂಬುದು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಮನವರಿಕೆಯಾಗಿತ್ತು. ಹೀಗೆ  ಮುಂದುವರಿದರೆ ಮುಂದಿನ ಲೋಕಸಭೆಯಲ್ಲಿ ಪ್ರತಿಕೂಲ ಪರಿಣಾಮ ಘಟಿಸಬಹುದು ಎಂಬುದನ್ನು ಮನಗಂಡು ಅವರ ಮೂರು ವರ್ಷದ ಅವಧಿ ಮುಕ್ತಾಯಗೊಳ್ಳುವುದಕ್ಕೆ ಮುಂಚಿತವಾಗಿಯೇ ಹುದ್ದೆಯಿಂದ ವಿರಮಿಸುವಂತೆ ಹೇಳಲಾಗಿ ಸಕ್ರಿಯ ರಾಜಕಾರಣದಿಂದ ದೂರವಿರುವಂತೆ ಮಾಡಲಾಗಿದೆ.
ಇನ್ನು ಕುಮ್ಮನಮ್ ರಾಜಶೇಖರ್ ರಾಜಕೀಯ ಪ್ರವೇಶವೇ ಮಾರಾಡ್ ಹತ್ಯಾಕಾಂಡದ ಸಂದರ್ಭದಲ್ಲಾಗಿತ್ತು. ಹಿಂದು ಐಕ್ಯವೇದಿಯ ನಾಯಕನಾಗಿದ್ದ ಅವರು ಶಾಂತಿ ಪ್ರಚಾರಕರಾಗಿ ಅವತರಿಸಿದ್ದರು, ಬಹಳ ಸಂಘರ್ಷಭರಿತವಾದ ಮಾರಾಡ್ ನಲ್ಲಿ ಮತ್ತೆ ಕೋಮು ಹಿಂಸೆ ತಲೆಯೆತ್ತದಂತೆ ಮಾಡಿದ್ದರಲ್ಲಿ ಕುಮ್ಮನಮ್ ಪ್ರಯತ್ನ ಪ್ರಶಂಸಾರ್ಹ. ಆದರೆ ದೌರ್ಭಾಗ್ಯವಶಾತ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವೊಂದರ ಅಧ್ಯಕ್ಷರಾದಾಗ ಅವರು ಆ ಹಳೆಯ ಕುಮ್ಮನಮ್ ಆಗಿರಲಿಲ್ಲ. ಜಿಹಾದಿ ಮತ್ತು ಕೆಂಪು ಉಗ್ರರ ವಿರುದ್ದ ಎಂಬ ಘೋಷಣೆಯಲ್ಲಿ ಪಯ್ಯನೂರಿನಿಂದ ತಿರುವನಂತಪುರಕ್ಕೆ ನಡೆಸಿದ ಜನರಕ್ಷಾ ರಾಲಿ ನಡೆಸಿದರು. ಅದರಲ್ಲಿ ಕೇರಳದಲ್ಲಿರುವ ಎಲ್ಲ ಮುಸ್ಲಿಮರು ಉಗ್ರರು ಎಂಬರ್ಥದ ಮಾತುಗಳನ್ನುಚ್ಚರಿಸಿ ಒಂದು ಸಮುದಾಯವನ್ನು ಅವಮಾನಿಸಲಾಯಿತು. ಈ ರೀತಿ ಅದು ಜನಶಿಕ್ಷಾ ಯಾತ್ರೆಯಾಗಿತ್ತು. ಆದರೆ ಅದರಿಂದ ಕೇರಳದ ಜಾತ್ಯತೀತತೆಯ ಗೋಡೆಯನ್ನು ಕೆಡವಲಾಗಲಿಲ್ಲ. ಇಂತಹ ಇತಿಹಾಸವಿರುವ ವ್ಯಕ್ತಿಯಿಂದ ಸಾಂವಿಧಾನಿಕವಾದ ಈ ಹುದ್ದೆಗೆ ಪ್ರಾಮಾಣಿಕವಾದ ಸೇವೆ ಲಭ್ಯವಾಗಬಹುದೆಂದು ನಂಬುವುದಾದರೂ ಹೇಗೆ ?