ಶರೀಅತ್ ಕೋರ್ಟುಗಳಿಗೆ ಪ್ರತಿಯಾಗಿ ಮೀರತ್ ನಲ್ಲಿ ದೇಶದ ಮೊತ್ತಮೊದಲ ಹಿಂದು ಕೋರ್ಟ್

0
949
ಮಹಾ ಸಭಾದ ಪ್ರಧಾನ ಕಾರ್ಯದರ್ಶಿಯಾದ ಪೂಜಾ ಶಕುನ್ ಪಾಂಡ್ಯೆಯವರನ್ನು ಪ್ರಥಮ ನ್ಯಾಯಾಧೀಶರಾಗಿ ಮಹಾಸಭಾದ ಉಪಾಧ್ಯಕ್ಷರಾದ ಪಂಡಿತ್ ಅಶೋಕ್ ಶರ್ಮಾರವರು ನೇಮಕ ಮಾಡುತ್ತಿರುವುದು

ಮೀರತ್: ದೇಶದಲ್ಲಿ ಮೊತ್ತ ಮೊದಲ ಹಿಂದೂ ಕೋರ್ಟನ್ನು ಮೀರತ್ ನಲ್ಲಿ ಸ್ಥಾಪಿಸಿರುವುದಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಘೋಷಿಸಿದೆ. ಶರಿಯಾ ನ್ಯಾಯಾಲಯಗಳಾದ ದಾರುಲ್ ಕಝಾಗಳಿಗೆ ಸರಿಸಮಾನವಾಗಿ ಹಿಂದು ಕೋರ್ಟನ್ನು ಸ್ಥಾಪಿಸಿರುವುದಾಗಿ ಅದು ಹೇಳಿಕೊಂಡಿದ್ದು ಕೇವಲ ಹಿಂದು ಧರ್ಮೀಯರ ಪ್ರಕರಣಗಳ ಕುರಿತು ಅದು ಕಾರ್ಯ ನಿರ್ವಹಿಸುವುದಾಗಿ ಘೋಷಿಸಿಕೊಂಡಿದೆ. ಇಸ್ಲಾಮಿಕ್ ಕಾನೂನಿನಂತೆ ದಾರುಲ್ ಕಝಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಂತೆಯೇ ಹಿಂದೂ ಧರ್ಮೀಯ ಕಾನೂನಿನಂತೆ ಹಿಂದು ಕೋರ್ಟ್ ಕಾರ್ಯನಿರ್ವಹಿಸುತ್ತದೆ ಎಂದು ಮೀರತ್ ನ ಮಹಾಸಭಾದ ಪ್ರಧಾನ ಕಛೇರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅದು ಹೇಳಿಕೊಂಡಿದೆ.

” ಎಲ್ಲರಿಗೆ ಒಂದೇ ರೀತಿಯ ಕಾನೂನನ್ನು ನೀಡಲು ಭಾರತೀಯ ಸಂವಿಧಾನವಿರುವಾಗ ಶರಿಯಾ ನ್ಯಾಯಾಲಯಗಳೇಕೆ ಎಂದು ಕೆಲವು ವರ್ಷಗಳ ಹಿಂದೆ ಪ್ರಶ್ನಿಸಿದ್ದೆವು. ಸರಕಾರಕ್ಕೆ ಪತ್ರಗಳನ್ನೂ ಬರೆದೆವು, ಆದರೆ ನಮ್ಮ ಬೇಡಿಕೆಗಳು ಫಲಿಸಲಿಲ್ಲ. ತತ್ಪರಿಣಾಮವಾಗಿ ನಾವು ಇಂದು ಹಿಂದು ಕೋರ್ಟನ್ನು ಸ್ಥಾಪಿಸಿದ್ದೇವೆ” ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ಉಪಾಧ್ಯಕ್ಷರಾದ ಪಂಡಿತ್ ಅಶೋಕ್ ಶರ್ಮಾ ತಿಳಿಸಿದ್ದಾರೆ.

ಈ ಕೋರ್ಟಿನ ಸಂಘರಕ್ಷಕ್ ಮಂಡಲದ ಐವರು ಸದಸ್ಯರಲ್ಲಿ ಶರ್ಮಾ ಕೂಡ ಒಬ್ಬರಾಗಿದ್ದಾರೆ. ಈ ಸಂದರ್ಭದಲ್ಲಿ ಮಹಾ ಸಭಾದ ಪ್ರಧಾನ ಕಾರ್ಯದರ್ಶಿಯಾದ ಪೂಜಾ ಶಕುನ್ ಪಾಂಡ್ಯೆಯವರನ್ನು ಪ್ರಥಮ ನ್ಯಾಯಾಧೀಶರಾಗಿ ಮಹಾಸಭಾದ ಉಪಾಧ್ಯಕ್ಷರಾದ ಪಂಡಿತ್ ಅಶೋಕ್ ಶರ್ಮಾರವರು ನೇಮಕ ಮಾಡಿದರು.

ಅಕ್ಟೋಬರ್ 2 ರ ಒಳಗಾಗಿ ಈ ಕೋರ್ಟಿನ ಕಾನೂನುಗಳನ್ನು ಘೋಷಿಸಲಾಗುವುದಲ್ಲದೇ ನವೆಂಬರ್ 15 ರ ಒಳಗಾಗಿ ದೇಶದ ವಿವಿಧ ಭಾಗಗಳಿಂದ ಐವರು ನ್ಯಾಯಾಧೀಶರನ್ನು ಈ ಕೋರ್ಟಿನಲ್ಲಿ ನೇಮಿಸಲಾಗುವುದು ಎಂದು ಮಹಾ ಸಭಾದ ಪ್ರಧಾನ ಕಾರ್ಯದರ್ಶಿಯಾದ ಪೂಜಾ ಶಕುನ್ ಪಾಂಡ್ಯೆ ತಿಳಿಸಿದ್ದಾರೆ.”

ನಾವು ಹಿಂದು ಧರ್ಮೀಯರಿಗೆ ಸಂಬಂಧಿಸಿದ ಹಿಂದು ಮಹಿಳೆಯರ ಮೇಲಿನ ದೌರ್ಜನ್ಯ, ಹಿಂದು ವಿವಾಹ, ಧನ- ಆಸ್ತಿಹಕ್ಕಗಳ ಕುರಿತಾದ ಪ್ರಕರಣಗಳನ್ನು ಪರಿಹರಿಸಲು ಈ ನ್ಯಾಯಾಲಯವನ್ನು ಸ್ಥಾಪಿಸಿದ್ದು ಸರಿಯಾದ ಜೈಲು ಶಿಕ್ಷೆ ನೀಡುವ ಮತ್ತು ಕಡೆಯ ಶಿಕ್ಷೆಯಾಗಿ ಮರಣದಂಡನೆಯನ್ನು ನೀಡುವ ಶಿಕ್ಷೆಗಳನ್ನು ಇದರಲ್ಲಿ ಒಳಪಡಿಸಲಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ‌.