ಕಪ್ಪು ಪಟ್ಟಿಯಲ್ಲಿ 3 ಟಿವಿ ಚಾನೆಲ್‌ಗಳು!
ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.9: ಸಮಾಜದಲ್ಲಿ ನಂಜು ಕಾರುವ, ದ್ವೇಷ ಹರಡುವ ಮೂರು ಚ್ಯಾನೆಲ್‍ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಪ್ರಮುಖ ಉದ್ಯಮಿ ರಾಜೀವ್ ಬಜಾಜ್ ಹೇಳಿದ್ದಾರೆ. ಈ ಚ್ಯಾನೆಲ್‍ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಸಿಎನ್‍ಬಿಸಿ ಚ್ಯಾನೆಲ್ ಚರ್ಚೆಯಲ್ಲಿ ರಾಜೀವ್ ಬಜಾಜ್ ಹೇಳಿದರು.
ಟಿವಿ ರೇಟಿಂಗ್ ಪಾಯಿಂಟು(ಟಿಆರ್‌ಪಿ)ಗಳಲ್ಲಿ ವಂಚನೆ ನಡೆಸಿದ ರಿಪಬ್ಲಿಕ್ ಟಿವಿ ಚ್ಯಾನೆಲ್ ಸಹಿತ ಮೂರು ಟಿವಿಗಳ ವಿರುದ್ಧ ಮುಂಬೈ ಪೊಲೀಸ್ ತನಿಖೆ ಘೋಷಿಸಿದೆ. ತದನಂತರ ಬಜಾಜ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಈವರೆಗೆ ಬಂಧಿಸಲಾಗಿದೆ. ಅರ್ನಾಬ್ ಗೋಸ್ವಾಮಿ ಸಹಿತ ರಿಪಬ್ಲಿಕ್ ಚ್ಯಾನೆಲ್ ಮುಖ್ಯಸ್ಥರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸಿನೆಸ್‌ನಲ್ಲಿ ಬ್ರಾಂಡ್ ಪ್ರಧಾನ. ಆದರೆ ಲಾಭ ಮಾತ್ರ ಬಿಸಿನೆಸ್ ಸಂಸ್ಥೆಗಳ ಉದ್ದೇಶ ಆಗಬಾರದು. ಸಮಾಜದ ಒಳಿತು ಪ್ರಧಾನವಾಗಿದೆ. ಮೂರು ಚ್ಯಾನೆಲ್‍ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಹೇಳಿದಾಗ ನನ್ನ ಮಾರ್ಕೆಟಿಂಗ್ ಮ್ಯಾನೇಜರ್, ನಾನು ಅದನ್ನು ಒಂಬತ್ತು ತಿಂಗಳ ಹಿಂದೆಯೇ ಮಾಡಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿ ನಾನು ಆಶ್ಚರ್ಯಗೊಂಡೆ ಎಂದು ರಾಜೀವ್ ಹೇಳಿದರು. 2005ರಿಂದ ರಾಜೀವ್ ಬಜಾಜ್ ಬಜಾಜ್ ಆಟೊದ ಮುಖ್ಯಸ್ಥ ಸ್ಥಾನದಲ್ಲಿದ್ದಾರೆ.
ರಿಪಬ್ಲಿಕ್ ಟಿವಿ ಸಹಿತ ಇರುವ ಚ್ಯಾನೆಲ್‍ಗಳ ಬ್ಯಾಂಕ್ ಖಾತೆಯನ್ನು ತನಿಖೆ ಮಾಡಲಾಗುವುದು ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಂವೀರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಜಾಹೀರಾತು ಮೂಲಕ ಸ್ವೀಕರಿಸಿದ ಫಂಡ್‍ಗಳು ಕೂಡ ತನಿಖೆಯ ವ್ಯಾಪ್ತಿಗೊಳಪಡಲಿದೆ. ರಿಪಬ್ಲಿಕ್ ಅಲ್ಲದೇ ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಚ್ಯಾನೆಲ್‍ಗಳು ವಂಚನೆ ನಡೆಸಿವೆ ಎಂದು ಅವರು ಹೇಳಿದ್ದಾರೆ.












