ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.24: ಉದ್ಯೋಗಾವಕಾಶವನ್ನು ಸೃಷ್ಟಿಸದಿದ್ದರೆ ಯುವಕರು ಬೀದಿಗಳಿಯಲಿದ್ದಾರೆ ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳು, ಸುಳ್ಳು ಸುದ್ದಿಗಳನ್ನು ಉಪಯೋಗಿಸಿ ಹೆಚ್ಚು ಕಾಲ ಬೇರೆಡೆಗೆ ಗಮನ ಹರಿಯುವಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಮುನ್ನೆಚ್ಚರಿಕೆ ನೀಡಿದರು. ಭವನ್ಸ್ ಎಸ್ಪಿಜೆಐಎಂಆರ್ ಸೆಂಟರ್ ಫಾರ್ ಫೈನಾನ್ಶಿಯಲ್ ಸ್ಟಡೀಸ್ ಆಯೋಜಿಸಿದ ವೆಬಿನಾರಿನಲ್ಲಿ ಅವರು ಮಾತಾಡುತ್ತಿದ್ದರು.
ನಿರುದ್ಯೋಗಿ ಯುವಕರನ್ನು ಸ್ವಲ್ಪ ಕಾಲ ಬೇರಡೆಗೆ ಗಮನ ಹರಿಯುವಂತೆ ಮಾಡಲು ಸಾಧ್ಯ. ಆದರೆ, ಸಾಕಷ್ಟು ಉದ್ಯೋಗವಕಾಶಗಳನ್ನು ಸೃಷ್ಟಿಸದಿದ್ದರೆ ಅವರು ಬೀದಿಗಳಿಯುತ್ತಾರೆ. ವಿಷಯವನ್ನು ಬೇರಡೆಗೆ ಹರಿಯುವಂತೆ ಮಾಡಲು ಸುಳ್ಳು ಸುದ್ದಿಗಳು, ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಬಹುದು. ಆದರೆ ಕೊನೆಗೆ ಅದು ಖಂಡಿತ ವಿಫಲವಾಗುತ್ತದೆ ಎಂದರು.
ಕೇಂದ್ರ ಸರಕಾರದ ಆತ್ಮನಿರ್ಭರ್ ಯೋಜನೆಯ ಕುರಿತು ರಘುರಾಮ್ ರಾಜನ್ ಮುನ್ನೆಚ್ಚರಿಕೆಯನ್ನು ನೀಡಿದರು. ತೆರಿಗೆಯನ್ನು ಉಳಿಸಿಕೊಂಡು ಆಮದು ಮಾಡುವುದನ್ನು ತಪ್ಪಿಸುವತ್ತ ಗಮನ ಕೇಂದ್ರೀಕರಿಸಲಾಗಿದೆಯೆಂದಾದರೆ ಅದು ಹಿಂದಿನ ವರ್ಷಗಳಲ್ಲಿ ಮಾಡಿ ವಿಫಲಗೊಂಡಿದೆ ಎಂದು ಅವರು ಹೇಳಿದರು.












