ಸೀರತ್ ಅಭಿಯಾನ: ಸಿಂಧನೂರು ಜಮಾಅತೆ ಇಸ್ಲಾಮಿಯಿಂದ ಬೃಹತ್ ಸ್ವಚ್ಛತಾ ಕಾರ್ಯ

0
645

ಸನ್ಮಾರ್ಗ ವಾರ್ತೆ

ಸಿಂಧನೂರು,ನ.1: ನಗರದಲ್ಲಿರುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಘಟಕದ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಿ, ಶುಚಿ ಮಾಡಲಾಯಿತು.

ಜಮಾಅತೆ ಇಸ್ಲಾಮಿಯಿಂದ ರಾಜ್ಯಾದ್ಯಂತ 15 ದಿನಗಳ ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಇಂದು ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯಕ್ರಮ ನಡೆದಿದ್ದು, ಸಿಂಧನೂರು ನಗರದ ಬಸ್ ನಿಲ್ದಾಣದ ಸ್ವಚ್ಛತೆಯನ್ನು ನೆರವೇರಿಸಲಾಯಿತು.

ಎಪ್ಪತ್ತಕ್ಕೂ ಹೆಚ್ಚು ಸ್ವಚ್ಛತಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿಲ್ದಾಣದ ಒಳಾಂಗಣ ಹಾಗೂ ಹೊರಾಂಗಣವನ್ನು ಸಂಪೂರ್ಣವಾಗಿ ಸ್ವಚ್ಛತೆಗೊಳಿಸಿ, ಬಳಿಕ ಸೂಚನಾ ಫಲಕಗಳನ್ನು ಹಾಕಲಾಯಿತು.

ಈ ಕಾರ್ಯಕ್ಕೆ ನಗರಸಭೆಯ ವತಿಯಿಂದ ನೀಡಲಾದ ಜೆಸಿಬಿ ಹಾಗೂ ಟ್ರಾಕ್ಟರ್‌ಗಳನ್ನು ಬಳಸಲಾಯಿತು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಘಟಕದ ಅಧ್ಯಕ್ಷ ಹುಸೇನ್‌ ಬಾಷಾ, ಅಭಿಯಾನ ಸಂಚಾಲಕ ಹುಸೇನ್ ಸಾಬ್, ಕಾರ್ಯದರ್ಶಿ ಹಾಫಿಝ್ ಸೈ ಒಸಾಮ, ಬಾಬರ್ ಬೇಗ್, ಖಾದರ್ ಸುಭಾನಿ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿ ಸಹಕಾರ ನೀಡಿದರು.