ಇಲ್ಲಿ ನ್ಯಾಯ ಕಳುವಾಗಿದೆ… (ಕವನ) ಸಿಹಾನ ಬಿ.ಎಂ.

0
1197

ನಾನೆತ್ತ ಹೋಗಲಿ
ಎಲ್ಲೆಂದು ಹುಡುಕಲಿ
ಇಲ್ಲಿ ನ್ಯಾಯ ಕಳುವಾಗಿದೆ…

ಬಯಲು ಬರಿದಾಗಿದೆ
ಮರಗಳು ಬೆತ್ತಲಾಗಿವೆ
ಬಂಧನಗಳ ಬೇಡಿಯೊಳಗಿದ್ದು
ಇರುವುದೆಲ್ಲವ ಕಳೆದುಕೊಂಡು
ಬುಸುಗುಡುವ ಹಾವುಗಳ
ನಡುವೆ ಗುಬ್ಬಚ್ಚಿಯಾಗಿ
ಬದುಕುತ್ತಿದ್ದೇನೆ ಜೀವ ಹಿಡಿಯಾಗಿ ಹಿಡಿದು…

ಕನಸುಗಳು ಮುರಿದು ಬಿದ್ದಿದೆ
ಬೇಲಿ ತುಂಬಾ ಮುಳ್ಳು ಎದ್ದಿದೆ
ಹಚ್ಚಿಟ್ಟ ದೀಪ ಆರಿ ಹೋಗಿದೆ
ಜಗವೆಲ್ಲಾ ಕತ್ತಲು…
ಮಾತು ಬಾರದ ನಾಲಗೆ ಹೊತ್ತು
ಜಜ್ಜಿ ಬಿಡುವ ಬೂಟುಗಾಲಿನಡಿಯಲ್ಲಿ
ನಲುಗುತಿಹೆನು ಸಂಕೋಲೆ ಮಧ್ಯೆ ಬಂಧಿಯಾಗಿ…

ಏರುತ್ತಲೇ ಇದೆ ಸ್ವಾರ್ಥದ ದಾಹ
ರಕ್ತ ಚಿಮ್ಮುವ ಹೆಣ್ಣಿನ ಮೋಹ
ಕತ್ತು ಹೊಸಕಿ ಕೊಲ್ಲುವರಲ್ಲಿ
ಎಣ್ಣೆ ಸುರಿದು ಸುಡುವರಿಲ್ಲಿ
ದಂಡಿಗಳದೇ ಆಹ್ವಾನ…ಮತ್ತದೇ ಕ್ರೂರತನ…
ಉಳಿವಿಗಾಗಿ ಹೋರಾಡಿ ಮೌನದಲಿ ರಾಜಿಯಾಗಿ
ಕುಸಿದು ಬಿದ್ದೆ ನೆಲೆ-ಬೆಲೆ ಕಳೆದುಕೊಂಡು…

ಚುಚ್ಚುತ್ತಿರುವೆ ನೀ ನಿರ್ದಯಿಯಾಗಿ
ಕೊನೆಯಲ್ಲಿ ಆ ಮುಳ್ಳು ನಿನ್ನನ್ನೇ ಚುಚ್ಚುವುದು
ಮರೆತರೆ! ಇಗೋ…ನೆನಪಿಸುವೆನಿಲ್ಲಿ…
ನೀ ಮಸೆದ ಕತ್ತಿ ನಿನ್ನನ್ನೇ ಕೊಯ್ಯುವುದು,
ರಕ್ತ ಕುಡಿದರೆಷ್ಟು…ನಾಲಗೆ ಕೊಯ್ಯಿದರೆಷ್ಟು…
ಇಂದಲ್ಲದಿದ್ದರೆ ನಾಳೆ ನಿನ್ನ ಯೋಗ್ಯತೆಯಿಷ್ಟೇ….

ನಾನೆತ್ತ ಹೋಗಲಿ
ಎಲ್ಲೆಂದು ಹುಡುಕಲಿ
ಇಲ್ಲಿ ನ್ಯಾಯ ಕಳವಾಗಿದೆ…

ಲೇಖಕಿ: ಸಿಹಾನ ಬಿ.ಎಂ.