ಸನ್ಮಾರ್ಗ ವಾರ್ತೆ
ಮುಂಬೈ,ನ.26: ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್, ಐಐಟಿ ವಿದ್ಯಾರ್ಥಿಗಳು ಸಲ್ಲಿಸಿದ ಮಾಹಿತಿಹಕ್ಕು ಅರ್ಜಿಯಲ್ಲಿ ಐಐಟಿ ಬಾಂಬೆ 2015-2019ರ ಕಾಲಾವಧಿಯಲ್ಲಿ ಹನ್ನೊಂದು ವಿಭಾಗಗಳ ಪಿಎಚ್ಡಿ ಮೀಸಲಾತಿಯಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಪರಿಗಣಿಸಿಲ್ಲ ಎನ್ನುವುದು ಬಯಲಾಗಿದೆ.
ಐಐಟಿಯಲ್ಲಿ 26 ವಿಭಾಗಗಳಿದ್ದು ಇವುಗಳಲ್ಲಿ ಶೇ.50 ಸೀಟುಗಳು ಪರಿಶಿಷ್ಟ ಜಾತಿ-ವರ್ಗ, ಒಬಿಸಿ ವಿಭಾಗದವರಿಗೆ ಮೀಸಲಾತಿಯಿದೆ. ಶೇ.10ರಷ್ಟು ಸೀಟುಗಳು ಹಿಂದುಳಿದ ವರ್ಗದವರಿಗೆ, ಒಬಿಸಿಗೆ ಶೇ.27, ಪರಿಶ್ಷಿಷ್ಟ ಜಾತಿಗೆ ಶೇ.15 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.7.5, ವಿಕಲಾಂಗರಿಗೆ ಶೇ.5ರಷ್ಟು ಮೀಸಲಾತಿಯಾಗಿದೆ. ಆದರೆ 2015ರಿಂದ 2019ರವರೆಗೆ ಶೇ.30 ಮೀಸಲಾತಿಯನ್ನು ಮಾತ್ರ ಬಾಂಬೆ ಐಐಟಿ ಜಾರಿಗೊಳಿಸಿದೆ. ಒಟ್ಟು 2,874 ಸೀಟುಗಳಲ್ಲಿ ಶೇ. 71.6 ಪಿಎಚ್ಡಿ ವಿದ್ಯಾರ್ಥಿಗಳು ಜನರಲ್ ಕೆಟಗರಿಯವರು. ಶೇ.19.2 ಮಂದಿ ಒಬಿಸಿಯವರು ಶೇ.7.5 ಪರಿಶಿಷ್ಟ ಜಾತಿಯವರು ಮತ್ತು ಶೇ.1.6 ಪರಿಶಿಷ್ಟ ವರ್ಗದವರು. ಇಷ್ಟೇ ಮೀಸಲಾತಿ ಐಐಟಿಯಿಂದ ಲಭ್ಯಗೊಳಿಸಲಾಗಿದೆ.
2015-2019ರ ಕಾಲಾವಧಿಯಲ್ಲಿ ಪರಿಶಿಷ್ಟ ವರ್ಗದ 43 ಮಂದಿ ಅರ್ಜಿಹಾಕಿದ್ದರು. ಒಬ್ಬರಿಗೂ ಪ್ರವೇಶ ನೀಡಿಲ್ಲ. 220 ಪರಿಶಿಷ್ಟ ಜಾತಿ ವಿಭಾಗದವರು ಅರ್ಜಿ ಹಾಕಿದ್ದರು ಏಳು ಮಂದಿಗೆ ಪ್ರವೇಶ ನೀಡಲಾಗಿದೆ. ಒಬಿಸಿ ವಿಭಾಗದ 607 ಮಂದಿ ಅರ್ಜಿ ಹಾಕಿದ್ದರು 19 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಆದರೂ ಮೀಸಲಾತಿಯನ್ನು ಸರಿಯಾಗಿ ಪಾಲಿಸಲಾಗಿದೆ ಎಂದು ಬಾಂಬೆ ಐಐಟಿ ಡೀನ್ ಅಮಿತಾವ್ ಡೆ ಹೇಳಿದ್ದಾರೆ. ಕಟ್ ಆಫ್ ಮಾರ್ಕಿಗಿಂತ ಹೆಚ್ಚು ಮಾರ್ಕ್ ಪಡೆದವರಿಗೆ ಪ್ರವೇಶ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಕಟ್ ಆಫ್ ಮಾರ್ಕಿಗೆ ಕೇಂದ್ರ ಯಾವ ನಿಬಂಧನೆ ಇರಿಸಿದೆ ಎಂದು ಐಐಟಿ ಅಧಿಕಾರಿಗಳು ಹೇಳುತ್ತಿಲ್ಲ. ಐಐಟಿ ಮೀಸಲಾತಿ ನಿಬಂಧನೆಗಳನ್ನು ಗಾಳಿಗೆ ತೂರಿದೆ ಎನ್ನಲಾಗುತ್ತಿದೆ.












