ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜ.6: ಭಾರೀ ಮಳೆಯನ್ನು ಎದುರಿಸಲು ರೈತರು ಸಿದ್ಧರಾಗಿದ್ದು ಕೇಂದ್ರ ಸರಕಾರದ ಕೃಷಿ ಕಾನೂನಿನ ವಿರುದ್ಧ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂ್ಉ ರೈತರು ಘೋಷಿಸಿದ್ದಾರೆ. ನಾಲ್ಕು ದಿನಗಳಿಂದ ದಿಲ್ಲಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯಿದ್ದಂತೆ ಪ್ರತಿಭಟನಾ ಕೇಂದ್ರ ವಿಸ್ತರಣೆಗೆ ಪ್ರತಿಯೊಬ್ಬ ರೈತರು ಕೈ ಜೋಡಿಸುತ್ತಿದ್ದಾರೆ. ಸಿಂಘು ಗಡಿಯಲ್ಲಿ ಟೆಂಟ್ಗಳನ್ನು ಪ್ಲಾಸ್ಟಿಕ್ ಶೀಟ್ನಿಂದ ಭದ್ರಪಡಿಸಲಾಗುತ್ತಿದೆ.
ಮಳೆಗೆ ನೆನೆಯದಂತಾಗಲು ಕುಠೀರಗಳಿಗೆ ದೊಡ್ಡ ಬಿದಿರಿನ ಕೋಲು, ಪ್ಲಾಸ್ಟಿಕ್ ಪೈಪ್ಗಳನ್ನು ಕಟ್ಟಿ ಟರ್ಪಾಲು ಶೀಟ್ ಮೇಲ್ಛಾವಣಿಗೆ ಹಾಕಲಾಗಿದೆ. ದಿನಾಲೂ ರೈತರನ್ನು ಉದ್ದೇಶಿಸಿ ಮಾತಾಡಲು ರೈತ ನಾಯಕರಿಗೆ ಮೆಗಾ ಟೆಂಟ್ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಸೋಮವಾರ, ಮಂಗಳವಾರ ಭಾರೀ ಮಳೆಯಾಗಿತ್ತು. ನವೆಂಬರ್ 26ರಿಂದ ರೈತರು ಇದ್ದ ಹೆಚ್ಚಿನ ಟೆಂಟ್ಗಳು ಕುಸಿದು ಬಿದ್ದವು, ಕೆಲವು ಸೋರಿದವು. ಇದರೊಂದಿಗೆ ಹೆಚ್ಚಿನ ಟೆಂಟ್ಗಳಲ್ಲಿ ಪಾತ್ರೆ, ದೊಡ್ಡ ಡ್ರಮ್ ಮೂಲಕ ಮಳೆ ನೀರನ್ನು ರೈತರು ಸಂಗ್ರಹಿಸಿದರು. ರೈತರ ದೈನಂದಿನ ಅಗತ್ಯತೆಗಳಿಗೆ ಈ ನೀರನ್ನು ಬಳಸಲು ರೈತರು ನಿರ್ಧರಿಸಿದ್ದಾರೆ.
ಹವಾಮಾನ ವೈಪರೀತ್ಯ ಗಮನಕ್ಕೆ ಬಂದ ನಂತರ ನೀರು ಸೋರದ ಶೀಟ್ಗಳು ಮತ್ತು ಟೆಂಟ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದಿಲ್ಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ ಅಧ್ಯಕ್ಷ ಮಂಜೀಂದರ್ ಸಿಂಗ್ ಸಿರ್ಸಾ ತಿಳಿಸಿದರು. ಮಹಿಳೆಯರಿಗೆ ಪ್ರತ್ಯೇಕ ಟೆಂಟ್ಗಳು. ಮಲಗಲು ಹೊದಿಕೆಗಳನ್ನು ಕೂಡ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ. ಗಡಿಯಲ್ಲಿ ಹೆಚ್ಚಿನ ಸೌಕರ್ಯ ಮಾಡಲು ತೀರ್ಮಾನಿಸಲಾಗಿದ್ದು, ಬುಧವಾರ ಸಂಜೆ ಹವಾಮಾನ ಅನುಕೂಲಕರವಾಗಿರಬಹುದು ಎಂದು ಭಾರತೀಯ ಕಿಸಾನ್ ಯೂನಿಯನ್ ಜನರಪ್ ಸೆಕ್ರಟರಿ ಹರೀಂದರ್ ಸಿಂಗ್ ಲಾಖೊವಲ್ ಹೇಳಿದರು.
ಏಳನೇ ಬಾರಿ ಚರ್ಚೆ ನಡೆಸಿಯೂ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರಕಾರ ಸಿದ್ಧವಾಗಿಲ್ಲ. ಆದ್ದರಿಂದ ಪ್ರತಿಭಟನೆ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಗಣರಾಜ್ಯೋತ್ಸವದಂದು ನಡೆಯುವ ರೈತರ ಟ್ರಾಕ್ಟರ್ ರ್ಯಾಲಿಗೆ ಮುಂಚಿತವಾಗಿ ಗುರುವಾರ ದಿಲ್ಲಿಯ ವಿವಿಧ ಗಡಿಯಲ್ಲಿ ಟ್ರಾಕ್ಟರ್ ರ್ಯಾಲಿಯ ರಿಹರ್ಸಲ್ ನಡೆಯಲಿದೆ. ರಾಷ್ಟ್ರೀಯ ಟ್ರಾಕ್ಟರ್ ರ್ಯಾಲಿಯಲ್ಲಿ ನೂರಾರು ಟ್ರಾಕ್ಟರ್ಗಳು ಭಾಗವಹಿಸಲಿವೆ ಎಂದು ರೈತ ನಾಯಕರು ತಿಳಿಸಿದ್ದಾರೆ.













