ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡ ಮತ್ತಿಬ್ಬರು ಸಾವು: ಸಾರ್ವಜನಿಕರಲ್ಲಿ ಆತಂಕ

0
593

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ : ದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಸ್ವೀಕರಿಸಿದವರ ಪೈಕಿ ಇನ್ನಿಬ್ಬರು ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ವಲಯದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಆಂದ್ರ ಪ್ರದೇಶದ ಅಶಾ ಕಾರ್ಯಕರ್ತೆ , ತೆಲಂಗಾಣದ ಅಂಗನವಾಡಿ ಕಾರ್ಯಕರ್ತೆ ಮೃತಪಟ್ಟವರು. ರವಿವಾರ 42 ವರ್ಷದ ವಿಜಯ ಲಕ್ಷ್ಮಿ ಕೊರೊನ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಮೆದುಳು ರಕ್ತಸ್ರಾವದಿಂದ ಮೃತಪಟ್ಟರು. ಇವರು ಆಶಾ ಕಾರ್ಯಕರ್ತೆಯಾಗಿದ್ದಾರೆ. ಜ. 19ಕ್ಕೆ ಚುಚ್ಚು ಹಾಕಿಸಿಕೊಂಡ ಮೇಲೆ ಆರೋಗ್ಯ ಸಮಸ್ಯೆ ಸೃಷ್ಟಿಯಾಗಿತ್ತು. ನಂತರ ಜ. 21ಕ್ಕೆ ಗುಂಟೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಅವರ ಸಾವು ಸಂಭವಿಸಿದ್ದು, ಪೋಸ್ಟ್ ಮಾರ್ಟಂಗೆ ಮೃತದೇಹವನ್ನು ಕಳುಹಿಸಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕೊರೋನಾ ವ್ಯಾಕ್ಸಿನ್ ಸ್ವೀಕರಿಸಿದ ಬಳಿಕ ಸಾವು ಸಂಭವಿಸಿದೆ ಎಂದು ಅವರ ಸಂಬಂಧಿಕರು ಬಲವಾಗಿ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿ ಸ್ಯಾಮುವೇಲ್ ಆನಂದ್ ಕುಮಾರ್ ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ಭೇಟಿ ಮಾಡಿದ್ದಾರೆ. ವಿಜಯಲಕ್ಷ್ಮಿಯ ಕುಟುಂಬಕ್ಕೆ ಕೆಲಸ ಕೊಡಿಸುವುದಾಗಿ ಮತ್ತು ನಷ್ಟ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ತೆಲಂಗಾಣದ ವಾರಂಗಲ್‍ನಲ್ಲಿ 45 ವರ್ಷದ ಅಂಗನವಾಡಿ ಕಾರ್ಯಕರ್ತೆ ಮೃತಪಟ್ಟಿದ್ದಾರೆ. ಜ. 19ಕ್ಕೆ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಶನಿವಾರ ರಾತ್ರೆ ಎದೆ ನೋವು ಕಾಣಿಸಿಕೊಂಡಿತ್ತು. ಕೆಲವು ಮದ್ದು ತೆಗೆದುಕೊಂಡು ಮಲಗಿದ್ದರು. ರವಿವಾರ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೊರೋನಾ ಚುಚ್ಚು ಮದ್ದು ಹಾಕಿಸಿಕೊಂಡ ಬಳಿಕ ತೆಲಂಗಾಣದಲ್ಲಿ ಎದೆ ನೋವಿನಿಂದ ಮೃತರಾದ ಎರಡನೇ ವ್ಯಕ್ತಿ ಇವರು.