ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಅನಾವರಣಗೊಳಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವು ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ರಾಷ್ಟ್ರಪತಿ ಉದ್ಘಾಟಿಸಿದ ಫೋಟೋ ಸುಭಾಷ್ ಚಂದ್ರ ಬೋಸ್ ನವರದ್ದಲ್ಲ ಅದು ಅವರ ಜೀವನಚರಿತ್ರೆಯಲ್ಲಿ ನಟಿಸಿದ ನಟ ಪ್ರೊಸೆನ್ಜಿತ್ ಚಟರ್ಜಿ ಅವರದ್ದು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಪೋಸ್ಟ್ ಗಳಲ್ಲಿ ಹೇಳಿಕೊಂಡಿದ್ದಾರೆ. ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಇದೊಂದು ಫೇಕ್ ನ್ಯೂಸ್ ಎಂದು ಹೇಳಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಜನ್ಮದಿನಾಚರಣೆಯಂದು ನೇತಾಜಿಯವರ ಭಾವಚಿತ್ರವನ್ನು ಶನಿವಾರ ಅನಾವರಣಗೊಳಿಸಿದ್ದರು. ಇದನ್ನು ಕೇಂದ್ರವು “ಪರಾಕ್ರಮ್ ದಿವಾಸ್” ಎಂದು ಹೆಸರಿಸಿ. ಭಾವಚಿತ್ರವು ನೇತಾಜಿಯದ್ದಲ್ಲ, ಅದು ನಿಜವಾಗಿ 2019 ರ ಜೀವನಚರಿತ್ರೆ “ಗುಮ್ನಾಮಿ” ಯಲ್ಲಿ ನೇತಾಜಿಯಾಗಿ ನಟಿಸಿದ ಪ್ರೊಸೆನ್ಜಿತ್ ಚಟರ್ಜಿ ಅವರದ್ದು ಎಂದು ಹಲವಾರು ಮಂದಿ ಗಮನಿಸಿದ ಬಳಿಕ ಈ ಫೋಟೋ ವೈರಲ್ ಆಗಿದೆ.
ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಫೋಟೋ ಪ್ರೊಸೆನ್ಜಿತ್ನನ್ನು ಹೋಲುವಂತಿಲ್ಲ. ಇದು ಅನಗತ್ಯ ವಿವಾದ ಎಂದು ತಿಳಿಸಿವೆ. ಅಲ್ಲದೇ, ಭಾವಚಿತ್ರವನ್ನು ರಚಿಸಿದ್ದು ಪ್ರಸಿದ್ಧ ಪದ್ಮಶ್ರೀ ಪ್ರಶಸ್ತಿ ವಿಜೇತ ಕಲಾವಿದ ಪರೇಶ್ ಮೈತಿ. ಅವರಿಗೆ ಫೋಟೋವನ್ನು ನೇತಾಜಿ ಅವರ ಕುಟುಂಬವೇ ಒದಗಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಫೋಟೋವನ್ನು ಒದಗಿಸಿರುವ ನೇತಾಜಿಯ ಕುಟುಂಬದ ಸದಸ್ಯ ಯಾರು ಎಂಬ ಪ್ರಶ್ನೆಗೆ ಬಿಜೆಪಿ ಇನ್ನೂ ಸ್ಪಷ್ಟನೆ ನೀಡಿಲ್ಲ. 56 ವರ್ಷದ ಚಿತ್ರ ಕಲಾವಿದ ಪರೇಶ್ ಮೈತಿ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯವರಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಭಾವಚಿತ್ರದ ವಿವಾದದ ಬಗ್ಗೆ ಖ್ಯಾತ ಪತ್ರಕರ್ತೆ ಬರ್ಕಾ ದತ್, ತೃಣಮೂಲ ಕಾಂಗ್ರೆಸ್ ಸಂಸದೆ ಮಾಹುವಾ ಮೊಯಿತ್ರಾ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಮೊಯಿತ್ರಾ ಅವರು ಬಳಿಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.












